ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆ ಒಂದು ಹೇಳಿಕೆಯಿಂದ ಇದೀಗ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಂತಾಗಿದೆ. ಅಲ್ಲದೇ ಈ ಬಾರಿ ವಿನಯ್ ಕುಲಕರ್ಣಿ ಅವರನ್ನೇ ಶತಾಯಗತಾಯ ಧಾರವಾಡ ಗ್ರಾಮೀಣ ಶಾಸಕರನ್ನಾಗಿ ಆಯ್ಕೆ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿ ನಿಂತಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಬಂಧಿತರಾಗಿ ಇದೀಗ ಜಾಮೀನಿನ ಮೇಲಿರುವ ವಿನಯ್ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನ್ಯಾಯಾಲಯ ನಿರ್ಬಂಧ ಹೇರಿದೆ. ಹೀಗಿದ್ದರೂ ಗ್ರಾಮೀಣ ಕ್ಷೇತ್ರದಲ್ಲಿ ಅವರ ವರ್ಚಸ್ಸು ಕಡಿಮೆಯಾಗಿಲ್ಲ. ಸದ್ಯ ವಿನಯ್ ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರೂ ಅವರು, ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಮೊನ್ನೆ ಬೆಳಗಾವಿಯಲ್ಲಿ ಹೇಳಿಕೆ ಕೊಟ್ಟಿದ್ದು, ಈ ಒಂದು ಹೇಳಿಕೆಯೇ ಅವರ ಅಭಿಮಾನಿಗಳಲ್ಲಿ ಹರ್ಷವನ್ನುಂಟು ಮಾಡಿದೆ. ಅಲ್ಲದೇ ಅವರ ಪ್ರತಿಸ್ಪರ್ಧಿಗೆ ತೀವ್ರ ಪೈಪೋಟಿ ನೀಡುವುದರ ಜೊತೆಗೆ ಧಾರವಾಡ ಗ್ರಾಮೀಣ ಕ್ಷೇತ್ರವನ್ನು ಹೈವೋಲ್ಟೇಜ್ ಕ್ಷೇತ್ರವನ್ನಾಗಿ ಮಾಡಲಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿನಯ್ ಕುಲಕರ್ಣಿ ಹಾಗೂ ಹಾಲಿ ಬಿಜೆಪಿ ಶಾಸಕ ಅಮೃತ ದೇಸಾಯಿ ಅವರ ಮಧ್ಯೆ ನೇರಾನೇರ ಪೈಪೋಟಿ ಏರ್ಪಟ್ಟು ಕೊನೆಗೆ ಅಮೃತ ದೇಸಾಯಿ ಗೆಲುವು ಸಾಧಿಸಿದ್ದರು. ಆದರೆ, ಪ್ರಸಕ್ತ ವರ್ಷ ವಾಸ್ತವ ಸ್ಥಿತಿ ಹಾಗಿಲ್ಲ. ವಿನಯ್ ಕುಲಕರ್ಣಿ ಪರ ಇಲ್ಲಿ ಅನುಕಂಪ ಕೆಲಸ ಮಾಡಬಹುದು ಎಂದು ಊಹಿಸಲಾಗಿದೆ. ಕ್ಷೇತ್ರದ ಹೊರಗಿದ್ದರೂ ಚುನಾವಣೆಗೆ ಸ್ಪರ್ಧೆ ಮಾಡಿ. ಗೆಲುವು ಸಾಧಿಸುವ ಹುಮ್ಮಸ್ಸನ್ನು ವಿನಯ್ ಹೊಂದಿದ್ದಾರೆ. ಏನೇ ಆಗಲಿ, ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಈಗಾಗಲೇ ಮತದಾರ ಪ್ರಭುಗಳು ಲೆಕ್ಕ ಹಾಕಿಟ್ಟುಕೊಂಡಿದ್ದಾರೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/10/2022 03:53 pm