ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲಿಯೇ ಎರಡನೆಯ ಅತಿದೊಡ್ಡ ಪಾಲಿಕೆ. ಇಲ್ಲಿಯ ವರೆಗೂ ಪಾಲಿಕೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ವಿಪಕ್ಷ ನಾಯಕರು ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಆದರೆ ಇದಕ್ಕೆ ಪೂರಕವೆಂಬಂತೆ ಇದೀಗ ಪಾಲಿಕೆ ಆಡಳಿತ ಪಕ್ಷದ ಸದಸ್ಯರಿಂದಲೇ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಗಂಭೀರ ಆರೋಪ ಕೇಳಿ ಬಂದಿದೆ.
ಪಾಲಿಕೆ ಸಾಮಾನ್ಯ ಸಭೆಯಲ್ಲಿಯೇ ಬಿಜೆಪಿ ಸದಸ್ಯರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಪಾಲಿಕೆ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ಕೂಡ ಮಾಡುತ್ತಿದ್ದಾರೆ.
ಮಹಾನಗರ ಪಾಲಿಕೆ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ವಲಯ ಕಚೇರಿಗಳಲ್ಲಿ ಏಜೆಂಟರುಗಳ ಹಾವಳಿ ಮೀತಿಮಿರಿದೆ. ಪ್ರತಿಯೊಂದು ಕೆಲಸಕ್ಕೂ ಲಂಚ ಕೊಟ್ಟರೆ ಮಾತ್ರ ಕೆಲಸ ಕಾರ್ಯಗಳು ಸರಾಗವಾಗುತ್ತವೆ ಎಂದು ಆರೋಪಿಸಿದರು.
ಪ್ರಮುಖವಾಗಿ ಒಳಚರಂಡಿ ವ್ಯವಸ್ಥೆ, ಇ-ಸ್ವತ್ತು, ಜಾತಿ ಆದಾಯ ಪ್ರಮಾಣ ಪತ್ರ ಸೇರಿದಂತೆ ಹೀಗೆ ಅನೇಕ ರೀತಿಯ ಕೆಲಸಗಳಿಗೆ ನಿಗದಿತ ಶುಲ್ಕವಿದ್ದರು, ಏಜೆಂಟರುಗಳ ಮೂಲಕ ವಲಯ ಕಚೇರಿಗಳ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆಂದು ಬಿಜೆಪಿ ಸದಸ್ಯರೇ ಬಹಿರಂಗವಾಗಿ ಸಭೆಯಲ್ಲಿ ಆರೋಪ ಮಾಡಿದ್ದು ಪಾಲಿಕೆ ದುಸ್ಥಿತಿಯ ಕೈಗನ್ನಡಿಯಾಗಿದೆ.
ಇನ್ನು ಸದಸ್ಯರ ಆರೋಪಕ್ಕೆ ಮೇಯರ್ ಈರೇಶ ಅಂಚಟಗೇರಿ ಪ್ರತಿಕ್ರಿಯೆ ನೀಡಿದ್ದು, ಭ್ರಷ್ಟಾಚಾರದ ಕುರಿತು ನಿರ್ದಿಷ್ಟ ದೂರಿನ ಮೇರೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ವಿಚಾರದ ಕುರಿತಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಅಲ್ದೆ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ಮಾಡುವಂತೆ ಆಗ್ರಹಿಸಿದರು.
ಒಟ್ಟಾರೆ ಬೇಲಿಯೇ ಎದ್ದು ಹೊಲ ಮೇಯ್ದಂತ ಪರಿಸ್ಥಿತಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯದ್ದಾಗಿದ್ದು, ಸ್ವಪಕ್ಷಿಯ ಈ ಗಂಭೀರ ಆರೋಪದಿಂದಾದ್ರೂ ಪಾಲಿಕೆಯ ಅಧಿಕಾರಿಗಳ ಈ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತಾ ಎಂಬುದನ್ನು ಕಾಯ್ದು ನೋಡಬೇಕು.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
01/08/2022 09:50 pm