ಹುಬ್ಬಳ್ಳಿ: ರಾಜ್ಯದಲ್ಲಿ ನಡೆದ ಹತ್ತಾರು ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಬೆಂಕಿ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗಲಭೆ ಹಿಂದೆ ಕಾಂಗ್ರೆಸ್ ಇದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಒಂದು ಸೇವಾ ಸಂಸ್ಥೆ. ದೇಶಭಕ್ತರನ್ನು ನಿರ್ಮಾಣ ಮಾಡುವ ಸಂಸ್ಥೆಯಾಗಿದೆ. ಇದಕ್ಕೆ ಕೈ ಹಾಕಿದ ನೆಹರು ಮತ್ತು ಇಂದಿರಾ ಗಾಂಧಿ ಸುಟ್ಟು ಹೋಗಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚಡ್ಡಿಗೆ ಬೆಂಕಿ ಹಾಕಲು ಹೇಳಿದ್ದಾರೆ. ಅವರೇ ಸುಟ್ಟು ಹೋಗುತ್ತಾರೆ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಅತಂತ್ರ ಸ್ಥಿತಿಯನ್ನು ಉಂಟು ಮಾಡಲು ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಆದ ಗಲಾಟೆಗಳಿಗೆ ಅವರ ವೈಫಲ್ಯವೇ ಕಾರಣ. ರಾಜ್ಯದಲ್ಲಿ ನಡೆಯುವ ಒಳ್ಳೆಯ ಕಾರ್ಯಗಳಿಗೆ ಸಿದ್ದರಾಮಯ್ಯ ಬೆಂಬಲ ನೀಡಲ್ಲ. ಅವರು ಎಲ್ಲಾ ವಿಚಾರದಲ್ಲಿ ಮಾತನಾಡಬೇಕು ಅಂತ ಮಾತನಾಡತ್ತಾರೆ. ಕಾಂಗ್ರೆಸ್‌ಗೆ ಹಿಂದೂಗಳ ಮತ ಬೇಡ ಎನ್ನುವ ಹಂತಕ್ಕೆ ಬಂದು ನಿಂತಿದ್ದಾರೆ. ಜೆಡಿಎಸ್ ಮುಸ್ಲಿಂ ಮತಗಳನ್ನು ಓಲೈಕೆ ಮಾಡಲಿಕ್ಕೆ ಸಿದ್ದರಾಮಯ್ಯ ನಿಂತಿದ್ದಾರೆ. ಪಠ್ಯ ಪುಸ್ತಕದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಪಠ್ಯ ಪುಸ್ತಕದಲ್ಲಿ ತಪ್ಪುಗಳಿದ್ದರೆ ತಿದ್ದುವುದಾಗಿ ಸರ್ಕಾರ ಹೇಳಿದೆ ಎಂದರು.
ಶ್ರೀರಾಮಸೇನೆಯಿಂದ ಮೈಕ್ ವಿಚಾರವಾಗಿ ಎರಡನೇ ಹಂತದ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನದಲ್ಲಿ ಎಲ್ಲಾ ಸಂಘಟನೆಗಳಿಗೆ ಪ್ರತಿಭಟನೆ ಮಾಡುವ ಅಧಿಕಾರವಿದೆ. ಅವರು ಮಾಡಲಿ ಆದರೆ ಅವರ ಅಜೆಂಡಾಗಳಿಗೆ ನಾವು ಮನ್ನಣೆ ನೀಡಲು ಆಗುವುದಿಲ್ಲ. ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಅದಕ್ಕೆ ಬದ್ಧವಾಗಿ ದೇಶದಲ್ಲಿ ಹಲವಾರು ಕಾಯ್ದೆ ತಂದಿದ್ದೇವೆ. ಆದರೆ ನಮ್ಮದು ಸರ್ವೇ ಜನ ಸುಖಿನೋ ಭವಂತು ಎನ್ನುವ ತತ್ವ. ಸರ್ಕಾರದಲ್ಲಿದ್ದಾಗ ಸಂವಿಧಾನ ಆಧಾರದ ಮೇಲೆ ಕೆಲಸ ಮಾಡಬೇಕು. ಆ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/06/2022 12:36 pm