ಧಾರವಾಡ: ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮುಸ್ಲಿಂ ವಿದ್ಯಾರ್ಥಿನಿ ಸಂಬಂಧ ಅಲ್‌ಖೈದಾ ಮುಖಂಡ ಮಾಡಿರುವ ವೀಡಿಯೋವನ್ನು ಆರ್‌ಎಸ್‌ಎಸ್‌ನವರೇ ಹುಟ್ಟುಹಾಕಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯನವರ ಹೇಳಿಕೆ ಬಾಲಿಷತನದಿಂದ ಕೂಡಿದೆ. ಅವರಂತಹ ದೊಡ್ಡ ಲೀಡರ್ ಹೀಗೆ ಮಾತನಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಒಂದು ಸಮಾಜ, ಒಂದು ದೇಶ ಹಾಗೂ ಒಂದು ಕುಟುಂಬ ಎಂದ ಮೇಲೆ ಬೇರೆ ಬೇರೆ ವಿಚಾರಗಳು ಇದ್ದೇ ಇರುತ್ತವೆ. ಇಂತಹ ತೊಂದರೆಗಳು ಬಂದಾಗ ಹೊರಗಿನ ಶಕ್ತಿಗಳು ಅದಕ್ಕೆ ಪ್ರಚೋದನೆ ನೀಡುವುದು ಸಹಜ. ಆದರೆ, ಇಂತಹ ಶಕ್ತಿಗಳನ್ನು ಖಂಡನೆ ಮಾಡುವುದು ಈ ದೇಶದ, ರಾಜ್ಯದ ಮುಸ್ಲಿಂ ನಾಯಕರ ಕರ್ತವ್ಯ ಎಂದಿದ್ದಾರೆ.
ಅಲ್‌ಖೈದಾ ಉಗ್ರ ಮಾಡಿರುವ ವೀಡಿಯೋವನ್ನು ಮುಸ್ಲಿಂ ನಾಯಕರು ಖಂಡಿಸಿದರೆ ಉಳಿದವರೂ ಮೆಚ್ಚಿಕೊಳ್ಳುತ್ತಾರೆ. ಆದರೆ, ಅಂತಹ ಉಗ್ರರ ಪ್ರಚೋದನೆಗೆ ಒಳಗಾದರೆ ಇಡೀ ದೇಶ, ಸಮಾಜ ತೊಂದರೆಗೆ ಒಳಾಗುತ್ತದೆ. ಹೀಗಾಗಿ ಮುಸ್ಲಿಂ ಬಾಂಧವರಿಗೆ ಮನವಿ ಮಾಡುತ್ತೇನೆ, ಮುಸ್ಕಾನ್ ತಂದೆ ಈ ಅಲ್‌ಖೈದಾ ಉಗ್ರನ ವೀಡಿಯೋವನ್ನು ಖಂಡಿಸಿದಂತೆ ಮುಸ್ಲಿಂ ನಾಯಕರೂ ಖಂಡಿಸಬೇಕು. ಹೊರಗಿನವರು ಇದರಲ್ಲಿ ಎಂಟ್ರಿಯಾಗಲು ಬಿಡಬಾರದು ಎಂದರು.
ಚಂದ್ರ ಹತ್ಯೆ ಸಂಬಂಧ ಪೊಲೀಸರು ಯಾವ ಮೊದಲ ಹೇಳಿಕೆ ಕೊಟ್ಟಿದ್ದಾರೋ ಅದನ್ನೇ ಗೃಹ ಸಚಿವರು ಹೇಳಿದ್ದಾರೆ. ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಒಟ್ಟಾರೆಯಾಗಿ ಈ ಹತ್ಯೆಯ ಸಂಪೂರ್ಣ ತನಿಖೆ ನಡೆಯಬೇಕು. ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.
ಧಾರವಾಡ ಈಜುಕೊಳಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು, ಈಜುಗೊಳಕ್ಕೆ ಹೆಚ್ಚುವರಿ ಹಣ ಬೇಕಿತ್ತು. ಈಜು ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಅಲ್ಲಿ ಮತ್ತೆ ಬೇರೆ ಬೇರೆ ಕಾಮಗಾರಿ ಆಗಬೇಕಿದೆ. ಮೊದಲು 13 ಕೋಟಿಯಲ್ಲಿ ಈಜುಗೊಳ ಸಿದ್ಧವಾಗುತ್ತಿತ್ತು. ಈಗ ಅದನ್ನು ಸಂಪೂರ್ಣ ಬದಲಾವಣೆ ಮಾಡಲಾಗಿದೆ. ಒಟ್ಟಾರೆ 33 ಕೋಟಿ ಮೊತ್ತದಲ್ಲಿ ಈಜುಗೊಳ ಸಿದ್ಧವಾಗುತ್ತಿದೆ.
ಇದು ಸರ್ಕಾರದ ಹಣದಲ್ಲಿ ನಿರ್ಮಾಣವಾಗುತ್ತಿಲ್ಲ. ದಾನಿಗಳ ದುಡ್ಡಿನಲ್ಲಿ ರೆಡಿ ಮಾಡಿಸಲಾಗುತ್ತಿದೆ. ಪ್ರಹ್ಲಾದ ಜೋಶಿ ಅವರ ವಿಶೇಷ ಪ್ರಯತ್ನದಿಂದ ಬೇರೆ ಬೇರೆ ಕಂಪೆನಿಗಳು ಈಗ ಧನ ಸಹಾಯ ಮಾಡಿವೆ. ಇನ್ನೂ ಎರಡ್ಮೂರು ದಿನದಲ್ಲಿ ಆ ಹಣ ಜಿಲ್ಲಾಧಿಕಾರಿಗಳಿಗೆ ಬಂದು ತಲುಪಲಿದೆ. ಆ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/04/2022 07:15 pm