ಧಾರವಾಡ: ಉನ್ನತ ಶಿಕ್ಷಣದ ಸಂಸ್ಥೆಗಳಿಗೆ ಹೆಚ್ಚು ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆ ಕಲ್ಪಿಸಲು ಶಾಸನಾತ್ಮಕ, ಆಡಳಿತಾತ್ಮಕ ಸುಧಾರಣೆಗಳನ್ನು ತರಲು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಕ್ರಮ ವಹಿಸಲಾಗುವುದು. ಧಾರವಾಡದಲ್ಲಿ ಸ್ಥಾಪನೆಯಾಗಿರುವ ಉನ್ನತ ಶಿಕ್ಷಣ ಅಕಾಡೆಮಿಯು ದೇಶದ ಉತ್ಕೃಷ್ಟ ಮಟ್ಟದ ಸಂಸ್ಥೆಯಾಗಿ ಹೊರಹೊಮ್ಮಲಿದೆ
ಎಂದು ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಧಾರವಾಡ ಹೊಯ್ಸಳ ನಗರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ವಸತಿ ನಿಲಯ ಹಾಗೂ ಕನ್ನಡ ಪ್ರಾಧ್ಯಾಪಕರ ನಿರಂತರ ಸಮಗ್ರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಅಕಾಡೆಮಿಯು ಭರವಸೆದಾಯಕ ಸಂಸ್ಥೆಯಾಗಿದೆ. ಗುಣಮಟ್ಟದ ಶಿಕ್ಷಣ ಒದಗಿಸುವುದು, ಈಗ ಇರುವ ಪದ್ಧತಿಗಳಲ್ಲಿನ ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಲು ಇಂತಹ ಸಂಸ್ಥೆಗಳು ಅಗತ್ಯ. ಜಾಗತೀಕರಣದ ಈ ಯುಗದಲ್ಲಿ ವಿಶ್ವದ ಜೊತೆಗೆ ಸ್ಪರ್ಧಿಸಲು ದೇಶ ಹಾಗೂ ರಾಜ್ಯಗಳು ಜಾಗತಿಕಮಟ್ಟದ ಶಿಕ್ಷಣ ಪದ್ಧತಿ ಅನುಸರಿಸಬೇಕು. 21ನೇ ಶತಮಾನವು ಜ್ಞಾನ, ತಂತ್ರಜ್ಞಾನ, ವಿಜ್ಞಾನ, ಆವಿಷ್ಕಾರಗಳ ಕಾಲಘಟ್ಟವಾಗಿದೆ.
ಉನ್ನತ ಶಿಕ್ಷಣ ಅಕಾಡೆಮಿ ಈ ನಿಟ್ಟಿನಲ್ಲಿ ಭರವಸೆದಾಯಕ ಹೆಜ್ಜೆಗಳನ್ನು ಇಡುತ್ತಿದೆ. ಪ್ರತಿನಿತ್ಯ ತರಬೇತಿಗಳ ಮೂಲಕ ಇಲ್ಲಿ ಪರಸ್ಪರ ಜ್ಞಾನ ವಿನಿಮಯವಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ, ಸ್ವಾಯತ್ತತೆ ನೀಡಲು ಶಾಸನಾತ್ಮಕ, ಆಡಳಿತಾತ್ಮಕ ಸುಧಾರಣೆಗಳನ್ನು ತರಲಾಗುವುದು. ಶಿಕ್ಷಣದ ಗುಣಮಟ್ಟ ಹೆಚ್ಚಿದರೆ ಬದುಕಿಗೆ ಸಾರ್ಥಕತೆ ಬರುತ್ತದೆ. ಬದಲಾದ ಪರಿಸ್ಥಿತಿಯಲ್ಲಿ ಭಾರತ ಹಾಗೂ ಕರ್ನಾಟಕಕ್ಕೆ ವಿಫುಲ ಅವಕಾಶಗಳಿವೆ. ಉನ್ನತ ಶಿಕ್ಷಣದಲ್ಲಿ ದೇಶಕ್ಕೆ ನಾಯಕತ್ವ ನೀಡುವ ಸಾಮರ್ಥ್ಯವನ್ನು ಈ ಸಂಸ್ಥೆ ಗಳಿಸಿಕೊಳ್ಳಲಿ. ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದರು.
ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ.ಎಸ್.ಎಂ ಶಿವಪ್ರಸಾದ, ಅಕಾಡೆಮಿಯ ಡೀನ್ ಡಾ.ಅರುಂಧತಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿದ್ದರು.
Kshetra Samachara
10/03/2022 08:21 pm