ಧಾರವಾಡ: ವಿಜ್ಞಾನಿಗಳು ರೈತರ ಜೀವನಕ್ಕೆ ಅನುಕೂಲವಾಗುವ ಬೆಳೆ ಮತ್ತು ಇಳುವರಿ ಬಗ್ಗೆ ಸಂಶೋಧನೆ ಮಾಡುವ ಮೂಲಕ ರೈತರ ಜೀವನಕ್ಕೆ ಹೊಸ ರೂಪ ನೀಡಲು ಮುಂದಾಗಬೇಕೆಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ವಿಜ್ಞಾನಿಗಳಿಗೆ ಮನವಿ ಮಾಡಿಕೊಂಡರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮಹತ್ವದ ಸಭೆ ನಡೆಸಿದ ಸಚಿವ ಮುನೇನಕೊಪ್ಪ, ಡಿಸಿಎಚ್ ಮತ್ತು ವರಲಕ್ಷ್ಮೀ ಹತ್ತಿಯನ್ನು ಬೆಳೆಯುವುದು ಸಂಪೂರ್ಣವಾಗಿ ನಿಂತು ಹೋಗಿದೆ. ಇದಕ್ಕೆ ಕಾರಣವಾಗಿದ್ದು, ಇಳುವರಿ ಕಡಿಮೆ ಬರುವುದಾಗಿದೆ. ಈ ಎರಡು ತಳಿಗಳು ಮತ್ತೆ ಬೆಳೆಯುವಂತಾಗಬೇಕೆಂದು ಎಂದ ಸಚಿವರು, ಇದಕ್ಕೆ ಬೇಕಾದ ಸೌಲಭ್ಯವನ್ನು ಸರ್ಕಾರ ನೀಡಲಿದೆ ಎಂದು ಸಚಿವರು ಹೇಳಿದರು.
ಕೃಷಿ ವಿಶ್ವವಿದ್ಯಾಲಯ ಇಲ್ಲಿಯವರೆಗೆ ಹತ್ತಿ ಹಾಗೂ ಜವಳಿ ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡಿದೆ. ಇದನ್ನು ಸ್ಮರಿಸಿಕೊಂಡು ಇನ್ನಷ್ಟು ಉತ್ತಮ ಸಾಧನೆಯನ್ನು ಮಾಡಬೇಕು. ಬಣ್ಣದ ಹತ್ತಿಯನ್ನು ಬೆಳೆಯಲು ರೈತರಿಗೆ ಪ್ರೇರಪಣೆ ನೀಡುವ ನಿಟ್ಟಿನಲ್ಲಿಯೂ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಬಣ್ಣದ ಹತ್ತಿಯಿಂದ ಸಿದ್ಧ ಉಡುಪು ತಯಾರಿಸಿ ಉಪಯೋಗಿಸಬೇಕು ಜೊತೆಗೆ ಬೇರೆ ದೇಶಗಳಿಗೆ ಕಳಿಸುವಂತಾಗಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಬಿ.ಚೆಟ್ಟಿ, ವಿ.ವಿ.ಕಾಗವಾಡ, ಯೋಗೀಶ ಸಿ.ಎಸ್, ಶಾಮಣ್ಣ, ಸಿ.ಎಸ್.ಫಡಕೆ, ಎಸ್.ಐ.ಸಣ್ಣಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯ ನಂತರ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕೃಷಿ ವಿಶ್ವವಿದ್ಯಾಲಯದ ಬಟ್ಟೆ ಹಾಗೂ ಸಿದ್ಧ ಉಡುಪು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ನೈಸರ್ಗಿಕ ಬಣ್ಣದ ಬಟ್ಟೆಗಳ ಉತ್ಪಾದನೆಯನ್ನು ಪರಿಶೀಲಿಸಿದರು.
Kshetra Samachara
31/01/2022 09:38 pm