ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕಮಲಕ್ಕೆ' ಕ್ಯಾರೆ ಎನ್ನದೇ 'ಕೈ' ಹಿಡಿದ ಅಣ್ಣಿಗೇರಿ ಮತದಾರ

ವರದಿ-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

ಧಾರವಾಡ: ನವಲಗುಂದ ರೈತ ಹೋರಾಟದ ನೆಲ. ಈ ನೆಲದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಇದೀಗ ರಾಜ್ಯ ಸರ್ಕಾರದ ಒಂದು ಅವಿಭಾಜ್ಯ ಅಂಗವಾಗಿದ್ದಾರೆ. ಅಣ್ಣಿಗೇರಿ ಪಟ್ಟಣ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ನವಲಗುಂದ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಅಕ್ಷರಶಃ ರಾಜಕೀಯ ರಣರಂಗವಾಗಿ ಮಾರ್ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದಕ್ಕೆ ಮುನ್ನುಡಿ ಬರೆದಂತಿದೆ ಅಣ್ಣಿಗೇರಿಯ ಪುರಸಭೆ ಚುನಾವಣೆ ಫಲಿತಾಂಶ.

ಹೌದು! 23 ಜನರ ಸಂಖ್ಯಾಬಲ ಹೊಂದಿರುವ ಅಣ್ಣಿಗೇರಿ ಪುರಸಭೆಯಲ್ಲಿ ಇದೀಗ ಕೈ ಹಿಡಿತ ಸಾಧಿಸಿದೆ. ಶಂಕರ ಪಾಟೀಲ ಮುನೇನಕೊಪ್ಪ ಅವರು ಇದೇ ಕ್ಷೇತ್ರದವರಾಗಿ, ಸಚಿವರಾಗಿದ್ದರೂ ಅಲ್ಲಿ ಬಿಜೆಪಿ ಕೇವಲ 5 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿದೆ. ಈ ಭಾಗದ ಮಾಜಿ ಶಾಸಕರಾದ ಎನ್.ಎಚ್.ಕೋನರಡ್ಡಿ ಕೂಡ ಹೊರೆ ಭಾರ ಇಳಿಸಿ ಇದೀಗ ಕೈ ಕುಲುಕಿದ್ದಾರೆ. ಹೀಗಾಗಿ ಅವರಿದ್ದ ಜೆಡಿಎಸ್ ಪಕ್ಷ ಈಗ ನವಲಗುಂದದಲಿಲ್ಲ. ಜೆಡಿಎಸ್ ಪಕ್ಷ ಪುರಸಭೆಯಲ್ಲಿ ತನ್ನ ಖಾತೆ ತೆರೆಯದೇ ಸಲೀಸಾಗಿ ಸೋಲೊಪ್ಪಿಕೊಂಡು ಹೊರನಡೆದಿದೆ. ಅದೇನೇ ಇರಲಿ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಬಿಜೆಪಿ, ನವಲಗುಂದ ಕ್ಷೇತ್ರದಲ್ಲೂ ಬಿಜೆಪಿ ಮಂತ್ರಿ ಇರುವಾಗಲೂ ಅಣ್ಣಿಗೇರಿಯಂತ ಸಣ್ಣ ಪುರಸಭೆಯಲ್ಲಿ ಕಮಲ ಅರಳಲು ಆಗದೇ ಇರುವುದು ಮತ್ತೊಂದು ರಾಜಕೀಯ ಚಟುವಟಿಕೆಗೆ ನಾಂದಿ ಹಾಡಿದಂತಾಗಿದೆ.

23 ಸ್ಥಾನಗಳ ಪೈಕಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 5 ಹಾಗೂ ಪಕ್ಷೇತರರು 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಮಣೆ ಹಾಕದ ಮತದಾರ ಕಾಂಗ್ರೆಸ್‌ಗೆ ಮೊದಲ ಮನ್ನಣೆ ನೀಡಿದ್ದಾನೆ. ವಿಚಿತ್ರ ಎಂದರೆ ಬಿಜೆಪಿಗಿಂತಲೂ ಪಕ್ಷೇತರರು ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ಇಲ್ಲಿ ಗಮನಾರ್ಹ. ಶಂಕರ ಪಾಟೀಲ ಅವರಿಗೆ ತಮ್ಮ ಕ್ಷೇತ್ರದಲ್ಲೇ ಪಕ್ಷ ಬಲಪಡಿಸಲು ಆಗುತ್ತಿಲ್ಲ. ಬರುವ ವಿಧಾನಸಭೆ ಚುನಾವಣೆ ಹೊಸ ಧಿಕ್ಕಿನತ್ತ ಸಾಗಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅಣ್ಣಿಗೇರಿ ಪುರಸಭೆ ಸೇರಿದಂತೆ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಅಣ್ಣಿಗೇರಿ ಪುರಸಭೆಯಲ್ಲಿ ಆಡಳಿತ ನಡೆಸಲು 13 ಜನ ಸದಸ್ಯರ ಬಲಾಬಲ ಬೇಕು. ಈಗಾಗಲೇ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದಿದ್ದು, ಓರ್ವ ಪಕ್ಷೇತರ ಅಭ್ಯರ್ಥಿಯನ್ನು ಕರೆದುಕೊಂಡು ಆಡಳಿತ ನಡೆಸುವ ಯೋಜನೆಯನ್ನು ಕಾಂಗ್ರೆಸ್ ಹಾಕಿಕೊಂಡಿದೆ. ವಿಚಿತ್ರ ಎಂದರೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿಲ್ಲ. ಅಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಯಾರು ಪುರಸಭೆ ಅಧ್ಯಕ್ಷರಾಗುತ್ತಾರೆ ಎಂಬುದೇ ಕೌತುಕ.

ಏನೇ ಆಗಲಿ ಈ ಪುರಸಭೆ ಚುನಾವಣೆ ಸ್ಥಳೀಯ ಬಿಜೆಪಿ ನಾಯಕರಿಗೆ ತಕ್ಕ ಪಾಠವನ್ನೇ ಕಲಿಸಿಕೊಟ್ಟಿದ್ದು, ಪಕ್ಷದ ನಾಯಕರು ಮುಂದೆ ಯಾವೆಲ್ಲ ಜನಪರ ಕಾರ್ಯ ಹಾಗೂ ಪಕ್ಷ ಸಂಘಟನೆಗೆ ಮುಂದಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

30/12/2021 06:44 pm

Cinque Terre

62.55 K

Cinque Terre

19

ಸಂಬಂಧಿತ ಸುದ್ದಿ