ಧಾರವಾಡ: ನಿನ್ನೆ ಅನಾರೋಗ್ಯದಿಂದ ನಿಧನರಾದ ಮಾಜಿ ಸಚಿವ ಎಸ್.ಆರ್.ಮೋರೆ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇದಕ್ಕೂ ಮೊದಲು ಧಾರವಾಡದ ಸಿ.ಬಿ.ನಗರದಲ್ಲಿರುವ ಬಿ.ಬಿ.ಕಲಿವಾಳ ಅವರ ನಿವಾಸಕ್ಕೂ ಭೇಟಿ ನೀಡಿದ ಸಿಎಂ, ನಿನ್ನೆ ವಿಧಿವಶರಾದ ಕಲಿವಾಳ ಅವರ ಅಂತಿಮ ದರ್ಶನ ಪಡೆದರು.
ಅಲ್ಲಿಂದ ನೇರವಾಗಿ ಮಾಜಿ ಸಚಿವ ಎಸ್.ಆರ್.ಮೋರೆ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಮೋರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮೋರೆ ಅವರು ಈ ಭಾಗದ ಹಿರಿಯ ನಾಯಕರು. ಧಾರವಾಡ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಳಕಳಿ ಹೊಂದಿದ್ದರು. ಅವರೊಬ್ಬ ಅಜಾತಶತ್ರು ಆಗಿದ್ದರು ಎಂದರು.
ನಮ್ಮ ರಾಜಕೀಯ ಪಕ್ಷಗಳು ಬೇರೆ ಬೇರೆ ಆಗಿದ್ದರೂ ನಮ್ಮೊಂದಿಗೆ ಮೋರೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಆರು ದಿನಗಳ ಹಿಂದಷ್ಟೇ ದೂರವಾಣಿಯಲ್ಲಿ ಮೋರೆ ಅವರು ನನ್ನೊಂದಿಗೆ ಮಾತನಾಡಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಮೋರೆ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಸಿಎಂ ಅವರು ಟಿಕಾರೆ ಅವರ ಮನೆಗೂ ಭೇಟಿ ನೀಡಿ ಅಲ್ಲಿಂದ ನೇರವಾಗಿ ಬೆಳಗಾವಿಗೆ ತೆರಳಿದರು.
Kshetra Samachara
10/12/2021 03:32 pm