ಧಾರವಾಡ: ಪ್ರಸ್ತುತ ಘೋಷಣೆಯಾಗಿರುವ ಹುಬ್ಬಳ್ಳಿ-ಧಾರವಾಡ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ಹಾಗೂ ಬಹಿರಂಗ ಪ್ರಚಾರಕ್ಕೆ ಮಾರ್ಗಸೂಚಿಗಳನ್ನು ನೀಡಿ ರಾಜ್ಯ ಚುನಾವಣಾ ಆಯೋಗವು ಇಂದು ಆದೇಶ ಹೊರಡಿಸಿದ್ದು, ಅಭ್ಯರ್ಥಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಚುನಾವಣಾ ಆಯೋಗವು ಅಭ್ಯರ್ಥಿಗಳು ಪ್ರಚಾರ ಕೈಗೊಳ್ಳುವ ಕುರಿತು ಭಾರತ ಸಂವಿಧಾನದ ಪರಿಚ್ಛೇದ 243 ಝಡ್‌ಎ ರನ್ವಯ ಕೆಲವು ನಿರ್ದೇಶನಗಳನ್ನು ನೀಡಿ ಆದೇಶಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಅಭ್ಯರ್ಥಿಯೂ ಸೇರಿ ಗರಿಷ್ಠ 5 ಜನ ಬೆಂಬಲಿಗರೊಂದಿಗೆ ಫೇಸ್‍ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ, ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬಹುದು. ಪ್ರಚಾರಕ್ಕೆ ವಾಹನ ಬಳಸುವುದನ್ನು ಮತ್ತು ಗುಂಪು ಗುಂಪು ಸೇರಿ ಪ್ರಚಾರ ಮಾಡುವುದನ್ನು ನಿಷೇಧಿಸಿದೆ. ಮುದ್ರಣ ಹಾಗೂ ವಿದ್ಯುನ್ಮಾನ (ಎಲೆಕ್ಟ್ರಾನಿಕ್ ಮೀಡಿಯಾ) ಮಾಧ್ಯಮದಲ್ಲಿ ಪ್ರಚಾರ ಕೈಗೊಳ್ಳಬಹುದು ಮತ್ತು ಅವುಗಳ ವೆಚ್ಚದ ವಿವರವನ್ನು ಸಲ್ಲಿಸಬೇಕು. ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರವನ್ನು ಹಂಚಬಹುದು. ಈ ಸಮಯದಲ್ಲಿ ಕಡ್ಡಾಯವಾಗಿ ಫೇಸ್‍ಮಾಸ್ಕ್ ಧರಿಸಿರಬೇಕು ಎಂದು ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಅದರಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವತ್ರಿಕ ಚುನಾವಣೆಗಾಗಿ ಕೈಗೊಳ್ಳುವ ಪ್ರಚಾರ ಕಾರ್ಯದಲ್ಲಿ ಆಯೋಗವು ನೀಡಿರುವ ಆದೇಶವನ್ನು ಕಡ್ಡಾಯವಾಗಿ ಎಲ್ಲ ಅಭ್ಯರ್ಥಿಗಳು ಪಾಲಿಸಬೇಕು. ಈ ಕುರಿತು ಸದಾಚಾರ ಸಂಹಿತೆಯ ಸಮಿತಿ ಕಣ್ಗಾವಲು ವಹಿಸಿದ್ದು, ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವರೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
18/08/2021 05:36 pm