ಧಾರವಾಡ: ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಧಾರವಾಡ ತಾಲೂಕಿನ 35 ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ನಿಗದಿಗೊಳಿಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದರು.
ಅವರು ಇಂದು ಮಧ್ಯಾಹ್ನ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಸಭಾಭವನದಲ್ಲಿ ಧಾರವಾಡ ತಾಲೂಕಿನ 35 ಗ್ರಾಮ ಪಂಚಾಯತಿಗಳ ಸದಸ್ಯರ ಸಭೆಯನ್ನು ಜರುಗಿಸಿ, ಮಾತನಾಡಿದರು.
ಸಮಾಜದ ಎಲ್ಲ ವರ್ಗದ ಜನರಿಗೆ ಅಧಿಕಾರ, ಸ್ಥಾನಮಾನ ಸಿಗುವ ಸದುದ್ದೇಶದಿಂದ ಚುನಾವಣಾ ಆಯೋಗ ಮೀಸಲಾತಿಯನ್ನು ನಿಗದಿಗೊಳಿಸಿದೆ. ಮೀಸಲಾತಿ ಅನ್ವಯ ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿಯೇ ಪಾರದರ್ಶಕವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ನಿಗದಿಗೊಳಿಸಿ ಆದೇಶಿಸಲಾಗುತ್ತಿದೆ ಎಂದರು.
ಮಾರ್ಗಸೂಚಿಗಳ ಪ್ರಕಾರ ಅನುಸೂಚಿತ ಜಾತಿ, ಅನುಸೂಚಿತ ಜಾತಿ ಮಹಿಳೆ, ಅನುಸೂಚಿತ ಪಂಗಡ, ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ‘ಅ’ ವರ್ಗ, ಹಿಂದುಳಿದ ‘ಅ’ ವರ್ಗ ಮಹಿಳೆ, ಹಿಂದುಳಿದ ‘ಬ’ ವರ್ಗ, ಹಿಂದುಳಿದ ‘ಬ’ ವರ್ಗ ಮಹಿಳೆ, ಸಾಮಾನ್ಯ ಮಹಿಳೆ ಸೇರಿದಂತೆ ಮೀಸಲಾತಿಗೆ ಅನುಗುಣವಾಗಿ ಚುನಾವಣಾ ಆಯೋಗ ನೀಡಿರುವ ತಂತ್ರಾಂಶ ಮೂಲಕ ನೇರವಾಗಿ ಹಾಗೂ ಅಗತ್ಯವಿದ್ದಲ್ಲಿ ತಂತ್ರಾಂಶದ ಸೂಚನೆ ಮೇರೆಗೆ ಬೇರೆ ಪಂಚಾಯತ್ ಸದಸ್ಯರಿಂದ ಲಾಟರಿ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಆಯ್ಕೆ ಮಾಡಿ, ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೀಸಲಾತಿ ನಿಗದಿಗೊಳಿಸಿ ಆದೇಶಿಸಿದರು
Kshetra Samachara
12/01/2021 09:42 pm