ನಾನು ಬಿಜೆಪಿ ಪಕ್ಷ ಸಿದ್ದಾಂತಗಳಿಗೆ ಒಪ್ಪಿಕೊಂಡೇ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಬರುವ ದಿನಗಳಲ್ಲಿ ಪಕ್ಷ ಬಲಪಡಿಸುವ ಜೊತೆಗೆ ಸಮಸ್ತ ಉತ್ತರ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡುವೆ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯ ಬಿಜೆಪಿ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿ ಕಾರ್ಯಕರ್ತರಿಂದ ಸ್ವಾಗತ ಪಡೆದುಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಅನೇಕ ನಾಯಕರು ಪಕ್ಷ ಸೇರುವಂತೆ ಒತ್ತಾಯಿಸಿದರು. ಪಕ್ಷೇತರ ಚುನಾವಣೆ ಎದುರಿಸಬೇಕು ಅಂತ ಕೆಲವರು ಹೇಳಿದರು. ಎಲ್ಲ ನಮ್ಮ ಮತದಾರರ ಒಪ್ಪಿಗೆ ಪಡೆದು ಬಿಜೆಪಿಗೆ ಸೇರಿದ್ದೇನೆ. ಸಭಾಪತಿಯಾಗಿ, ಶಾಸಕನಾಗಿ ಮುಂದುವರೆಯಬಹುದಿತ್ತು. ಆದರೆ ನಾನು ಈವರೆಗೆ ನೈತಿಕತೆ ಇಟ್ಟುಕೊಂಡು ಬಂದವನು ಎಂದು ಹೊರಟ್ಟಿ ತಿಳಿಸಿದರು.
ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲಬಾರಿಗೆ ಸಭಾಪತಿಯೋರ್ವ ರಾಜೀನಾಮೆ ನೀಡಿದ್ದಾನೆ. ಹಲವು ಪಕ್ಷಗಳಲ್ಲಿ ಕೆಲಸ ಮಾಡಿದ್ದೇನೆ. ರಾಮಕೃಷ್ಣ ಹೆಗಡೆ ಸಾಯುವವರೆಗೂ ಅವರ ಜೊತೆಗೆ ಇದ್ದೆ. ಹಲವು ರಾಜಕೀಯ ಮುಖಂಡರೊಂದಿಗೆ ಒಳ್ಳೆ ಒಡನಾಟ ಹೊಂದಿದ್ದೇನೆ. ಎಲ್ಲೇ ಇದ್ದರೂ ಕಳಂಕರಹಿತನಾಗಿ ಇರುತ್ತೇನೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಎಲ್ಲರ ಮಾರ್ಗದರ್ಶನ ಪಡೆದು ಪಕ್ಷ ಸಂಘಟನೆ ಮಾಡುವೆ. ಬಹಳ ಆತ್ಮೀಯತೆಯಿಂದ ಬಿಜೆಪಿಗರು ನನ್ನನ್ನು ಬರಮಾಡಿಕೊಂಡಿದ್ದಾರೆ ಎಂದು ಬಸವರಾಜ ಹೊರಟ್ಟಿ ಹೇಳಿದರು.
ಇನ್ನು ಮೇ. 23, 24 ರಂದು ಕುಟುಂಬಸಮೇತ ನಾಮಪತ್ರ ಸಲ್ಲಿಸುತ್ತೇನೆ. ಮೇ.26 ರಂದು ಬಿಜೆಪಿ ಮುಖಂಡರ ಜೊತೆ ಸಾರ್ವಜನಿಕರ ಜೊತೆ ಸೇರಿ ನಾಮಪತ್ರ ಸಲ್ಲಿಸುತ್ತೇನೆ. ಬದಲಾವಣೆ ಜಗದ ಮಿಯಮ. ನಮ್ಮ ಮತದಾರರ ಭಾವನೆಗಳಿಗೆ ತಕ್ಕನಾಗಿ ನಡೆದುಕೊಂಡಿದ್ದೇನೆ. ಜೆಡಿಎಸ್ ಬಿಡಲು ನಿರ್ದಿಷ್ಟ ಕಾರಣ ಇಲ್ಲ. ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಅಂತ ಒತ್ತಾಯ ಇತ್ತು. ಪಕ್ಷಕ್ಕಿಂತ ಶಿಕ್ಷಕರ ಜೊತೆ ವೈಯಕ್ತಿಕ ಸಂಬಂಧ ಚೆನ್ನಾಗಿದೆ. ಅವರು ನನ್ನ ಕೈ ಬಿಡಲ್ಲ. ಜೆಡಿಎಸ್ ನನ್ನನ್ನ ಬೆಳೆಸಿದೆ, ಆ ಬಗ್ಗೆ ಟೀಕೆ ಮಾಡೋದಿಲ್ಲ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/05/2022 05:12 pm