ಧಾರವಾಡ: ಹೀಗೆ ಒಂದೆಡೆ ರೈಲ್ವೆ ಗೇಟ್ ಹಾಕಿದ್ದರಿಂದ ನಿಂತಿರೋ ವಾಹನಗಳು. ರೈಲ್ವೆ ಗೇಟ್ ತೆಗೆಯುತ್ತಿದ್ದಂತೆಯೇ ಕಾದು ಕಾದು ಸುಸ್ತಾಗಿ ಲಘುಬಗೆಯಿಂದ ಹೋಗುತ್ತಿರೋ ವಾಹನ ಸವಾರರು. ಗೇಟ್ ತೆಗೆದ ಕೆಲವೇ ಕ್ಷಣಗಳಲ್ಲಿ ಪುನಃ ಗೇಟ್ ಕ್ಲೋಸ್. ಇದು ಧಾರವಾಡದ ಗಣೇಶ ನಗರ ರೈಲ್ವೆ ಗೇಟ್ ರಸ್ತೆಯ ಪರಿಸ್ಥಿತಿ. ಧಾರವಾಡ, ಹಳಿಯಾಳ, ದಾಂಡೇಲಿ ಪ್ರಮುಖ ರಸ್ತೆಯಲ್ಲಿರೋ ಈ ರೈಲ್ವೆ ಕ್ರಾಸಿಂಗ್‌ನಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಅನೇಕ ವರ್ಷಗಳಿಂದ ಬೇಡಿಕೆ ಇದೆ. ಆದರೂ ಸಹ ಆ ಬೇಡಿಕೆ ಈಡೇರುತ್ತಿಲ್ಲ. ಧಾರವಾಡದ ಕಲ್ಯಾಣ ನಗರದಲ್ಲಿ ಸೇತುವೆ ಆಗುತ್ತಿದ್ದು, ಅದರ ಜೊತೆಗೆ ಕ್ಯಾರಕೊಪ್ಪ ಸೇತುವೆಗೂ ಇತ್ತೀಚೆಗೆ ಅನುಮೋದನೆ ಲಭಿಸಿದೆ. ಆದರೆ ಪ್ರಮುಖ ರಸ್ತೆಯಲ್ಲಿರೋ ಈ ಕ್ರಾಸಿಂಗ್‌ನಲ್ಲಿ ಮಾತ್ರ ಸೇತುವೆ ನಿರ್ಮಾಣಕ್ಕೆ ಯಾವುದೇ ಅನುಮೋದನೆ ಲಭಿಸುತ್ತಿಲ್ಲ. ಯಾವುದಾದರೂ ಅಪಘಾತಗಳು ಸಂಭವಿಸಿದಾಗ, ಅಂಬ್ಯುಲೆನ್ಸ್‌ಗಳು ಸಹ 15 ರಿಂದ 20 ನಿಮಿಷಗಳ ಕಾಲ ನಿಲ್ಲುವಂತಹ ಪರಿಸ್ಥಿತಿ ಇದೆ. ಇಲ್ಲಿ ನಿತ್ಯ ಓಡಾಡೋ ಜನರಿಗಂತೂ ಧರ್ಮ ಸಂಕಟ.
ಉತ್ತರ ಕನ್ನಡ ಜಿಲ್ಲೆ ಹಾಗೂ ಧಾರವಾಡ ಜಿಲ್ಲೆಯ ಹತ್ತಾರು ಗ್ರಾಮಗಳಿಗೂ ಇದೇ ಪ್ರಮುಖ ರಸ್ತೆ. ಅರ್ಧ ಗಂಟೆಗೊಮ್ಮೆ ಇಲ್ಲವೋ ಗಂಟೆಗೊಮ್ಮೆ ಇಲ್ಲಿ ಗೇಟ್ ಬಂದ್ ಆಗುತ್ತಲೇ ಇರುತ್ತದೆ. ಅಲ್ಲದೇ ಇಲ್ಲಿ ಎರಡು ರೈಲ್ವೆ ಲೈನ್‌ಗಳಿರುವ ಕಾರಣಕ್ಕೆ ಒಂದೊಂದು ಸಲ ಎರಡೆರಡು ರೈಲುಗಳು ಬರೋ ಸಾಧ್ಯತೆ ಇದ್ದಾಗ ಅರ್ಧ ಗಂಟೆಗಟ್ಟಲೇ ಗೇಟ್ ಬಂದ್ ಇರುತ್ತೆ. ನಿತ್ಯವೂ ಹದಿನೈದಕ್ಕೂ ಹೆಚ್ಚು ಸಲ ಗೇಟ್ ಹಾಕುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಕಲಘಟಗಿ ಮಾಜಿ ಶಾಸಕ ಸಂತೋಷ ಲಾಡ್ ನೇತೃತ್ವದಲ್ಲಿ ಈ ಭಾಗದವರೆಲ್ಲ ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಸಹ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.
ಒಟ್ಟಾರೆಯಾಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡೋ ಈ ರಸ್ತೆಯಲ್ಲಿ ರಸ್ತೆ ಮತ್ತು ರೈಲ್ವೆ ಮಾರ್ಗ ಆದಾಗಿನಿಂದಲೂ ಸೇತುವೆ ಮಾಡೋ ಬಗ್ಗೆ ವಿಚಾರಗಳೇ ಬಂದಿಲ್ಲ. ಈಗ ಈ ರಸ್ತೆಯಲ್ಲಿ ಜನರ ಮತ್ತು ವಾಹನಗಳ ಓಡಾಟ ಹೆಚ್ಚಾಗಿದೆ. ಹೀಗಾಗಿ ಬೆಳವಣಿಗೆ ಆಧರಿಸಿ ಆದಷ್ಟು ಬೇಗ ಇಲ್ಲಿ ಸೇತುವೆ ಮಾಡಬೇಕಾಗಿದ್ದು, ಅದು ಈಡೇರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
08/02/2022 07:52 pm