ಹುಬ್ಬಳ್ಳಿ : ಕೇಂದ್ರ ಸರ್ಕಾರ ಜಾರಿ ಗೊಳಿಸಿರುವ 3 ಕೃಷಿ ಕಾಯ್ದೆಗಳು ರೈತರ ಪ್ರಗತಿ ಸಹಾಯಕವಾಗಿವೆ. ಅನಗತ್ಯವಾಗಿ ರೈತರು ಗೊಂದಲಕ್ಕೆ ಈಡಾಗಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ಗೋಪನಕೊಪ್ಪ ಗ್ರಾಮದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ, ಆನ್ ಲೈನ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಕಿಸಾನ್ ಸಮ್ಮಾನ್ ಯೋಜನೆ ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈತರ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ 18 ಸಾವಿರ ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.
ನೂತನ ಕಾಯ್ದೆಯ ಮೂಲಕ ದಲ್ಲಾಳಿಗಳ ಕಾಟ ತಪ್ಪಲಿದೆ. ಎಪಿಎಂಸಿ ಮಾರುಕಟ್ಟೆಯ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರುವುದಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮಾರುಕಟ್ಟೆ ವಿಸ್ತರಣೆಯಾಗಲಿದೆ.
ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಬಂದು ಫಸಲನ್ನು ಖರೀದಿಸಲಿದ್ದಾರೆ.
ಸರ್ಕಾರ ಬೆಂಬಲ ಬೆಲೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆಯುವುದಿಲ್ಲ. ನೂರಾರು ರೈತರು ರೈತ ಉತ್ಪಾದಕ ಸಂಘಗಳನ್ನು ರಚಿಸಿ ಒಪ್ಪಂದ ಕೃಷಿ ಮಾಡಬಹುದು. ರೈತರ ಒಪ್ಪಿಗೆ ಇದ್ದರೆ ಮಾತ್ರ ಒಪ್ಪಂದ ಕೃಷಿಗೆ ಅವಕಾಶ ಕಲ್ಪಿಸಲಾಗಿದೆ.
ಒಪ್ಪಂದ ಕೃಷಿಯಲ್ಲಿ ಕೇವಲ ಫಸಲಿನ ಮೇಲೆ ಗುತ್ತಿಗೆದಾರರಿಗೆ ಅಧಿಕಾರವಿರುತ್ತದೆ. ರೈತರ ಜಮೀನ ಮೇಲೆ ಅಲ್ಲ. ಜಮೀನಿನ ಒಡೆತನ ರೈತನ ಬಳಿಯೇ ಇರುತ್ತದೆ.
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ನೀಡುವ 6 ಸಾವಿರ ರೂಪಾಯಿಗಳ ಜೊತೆಗೆ ರಾಜ್ಯ ಸರ್ಕಾರ 4 ಸಾವಿರ ರೂಪಾಯಿಗಳನ್ನು ನೀಡಿ, ಒಟ್ಟು ಹತ್ತು ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದರು.
ರೈತರೊಂದಿಗೆ ಸಂವಾದ ನಡೆಸಿದ ಸಚಿವ ಜಗದೀಶ್ ಶೆಟ್ಟರ್ ಸಮಸ್ಯೆಗಳನ್ನು ಆಲಿಸಿದರು. ಸಾಲ ಮನ್ನಾ ಯೋಜನೆ ಅನುಷ್ಠಾನದಲ್ಲಿ ತಾಂತ್ರಿಕ ದೋಷದಿಂದ ತಡವಾಗಿದೆ.
ಕಂದಾಯ ಹಾಗೂ ಬ್ಯಾಂಕ್ ಅಧಿಕಾರಿಗಳು ರೈತರ ಸಮಸ್ಯೆ ಸ್ಪಂದಿಸುವಂತೆ ಸೂಚನೆ ನೀಡುತ್ತೇನೆ. ಫಸಲ್ ಭೀಮಾ ಯೋಜನೆಯಡಿ ಗೋಪನಕೊಪ್ಪಾ ಗ್ರಾಮವನ್ನು ತರಲಾಗುವುದು ಎಂದು ರೈತರಿಗೆ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ರೈತರನ್ನು ಸನ್ಮಾನಿಸಲಾಯಿತು. ಗ್ರಾಮದ ಕಲ್ಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕ್ಕಾಗಿ ಮುಜರಾಯಿ ಇಲಾಖೆಯಿಂದ ನೀಡಲಾದ 5 ಲಕ್ಷ ರೂಪಾಯಿಗಳ ಚೆಕ್ ವಿತರಿಸಲಾಯಿತು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ, 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗೋಪನಕೊಪ್ಪ ಕರೆಮ್ಮಾದೇವಿ ದೇವಸ್ಥಾನದ ಸಮುದಾಯ ಭವನ ಹಾಗೂ ಸ್ವ ಚ್ಛ ಭಾರತ ಮಿಷನ್ ಅಡಿ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯವನ್ನು ಸಚಿವ ಜಗದೀಶ್ ಶೆಟ್ಟರ್ ಲೋಕಾರ್ಪಣೆ ಮಾಡಿದರು.
ಶಾಸಕ ಪ್ರದೀಪ್ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಮುಖಂಡರಾದ ಮಲ್ಲಿಕಾರ್ಜುನ ಸವಕಾರ, ಈರನಗೌಡ ಪಾಟೀಲ, ಸಂತೋಷ್ ಚವ್ಹಾಣ್ ಉಪಸ್ಥಿತರಿದ್ದರು.
Kshetra Samachara
25/12/2020 05:36 pm