ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಹುಬ್ಬಳ್ಳಿ : ವಿಧಾನ ಸಭಾ ಕ್ಷೇತ್ರಗಳ ಭದ್ರ ಬುನಾದಿ ಎಂದೇ ಭಾವಿಸಲಾಗುವ ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಪಕ್ಷಾತೀತ ಚುನಾವಣೆಯಾಗಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಇದೊಂದು ಮಿನಿ ವಿಧಾನಸಭಾ ಚುನಾವಣೆ ಎಂಬ ಮಟ್ಟಕ್ಕೆ ಹೋರಾಡಬೇಕಾಗಿದೆ.
ಮುಂಬರುವ 2023 ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಭದ್ರವಾಗಿಟ್ಟುಕೊಳ್ಳಬೇಕಾದರೆ ಹಾಲಿ ಶಾಸಕರು ತಮ್ಮ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲೇ ಬೇಕಾಗಿದೆ.
ಜಿಲ್ಲೆಯ ಏಳು ತಾಲೂಕುಗಳ ಪೈಕಿ ಆರು ತಾಲೂಕುಗಳು ಬಿಜೆಪಿ ಶಾಸಕರ ಪ್ರಭಾವದಲ್ಲಿವೆ. ಕುಂದಗೋಳದಲ್ಲಿ ಕಾಂಗ್ರೆಸ್ಸಿನ ಕುಸುಮಾವತಿ ಶಿವಳ್ಳಿ ಏಕಾಂಗಿಯಾಗಿ ಹೋರಾಡಬೇಕಾಗಿದೆ.
ಜಿಲ್ಲೆಯ ಕಾಂಗ್ರೆಸ್ಸಿನ ಪ್ರಭಾವಿ ನಾಯಕರೆಂದೇ ಗುರುತಿಸಿಕೊಂಡಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲು ಸೇರಿರುವುದು ಸಹ ಪಕ್ಷಕ್ಕೆ ಹಿನ್ನಡೆಯಾಗಿದೆ. ಒಂದು ವೇಳೆ ಜಾಮೀನು ಪಡೆದು ಹೊರಬಂದರೂ ವಿನಯ ಮೊದಲಿನಂತೆ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗುವುದು ಅಸಾಧ್ಯ. ಒಂದು ವೇಳೆ ಬಂದರೂ ಬಿಜೆಪಿಗರು ಇದನ್ನೇ ಬಂಡವಾಳ ಮಾಡಿಕೊಳ್ಳುವುದನ್ನು ತಳ್ಳಿ ಹಾಕುವಂತಿಲ್ಲ.
ಬಿಜೆಪಿ ಶಾಸಕರಾದ ಅಮೃತ್ ದೇಸಾಯಿ, ಅರವಿಂದ ಬೆಲ್ಲದ್, ಸಚಿವರಾದ ಜಗದೀಶ್ ಶೆಟ್ಟರ್, ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಸಿ.ಎಂ ನಿಂಬಣ್ಣವರ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿವುದರಲ್ಲಿ ಸಂಶವಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಸಾಥ್ ನೀಡಲಿದ್ದಾರೆ.
ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿರುವ ಜೆಡಿಎಸ್ ಅಲ್ಲಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಅಡ್ಡಗಾಲು ಹಾಕಲಿದೆ. ಆರ್ಥಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಪಕ್ಷ ಕ್ಷೀಣವಾಗಿರುವುದೇ ಇದಕ್ಕೆ ಕಾರಣ.
ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುವುದರಿಂದ ಅಭ್ಯರ್ಥಿಗಳು ಮತದಾರರನ್ನು ತಲುಪಲು ಪರದಾಡುವಂತಾಗಿದೆ. ಮಾಜಿ ಸದಸ್ಯರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಮೂಲ ಸೌಕರ್ಯವಿಲ್ಲದೆ ಗ್ರಾಮಸ್ಥರು ವ್ಯಗ್ರರಾಗಿದ್ದಾರೆ.
ಹೀಗಾಗಿ ಅಭ್ಯರ್ಥಿಗಳು ತಾವು ಮಾಡಿದ ಅಭಿವೃದ್ಧಿ ಕಾಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಲು ಹೆಣಗಬೇಕಾಗಿದೆ. ಇದೇ ಅವಕಾಶ ಬಳಸಿಕೊಂಡ ಅವರ ವಿರೋಧಿಗಳು ಹಾಗೂ ಆಕಾಂಕ್ಷಿಗಳು ಮಾಜಿ ಸದಸ್ಯರ ಅವ್ಯವಹಾರ ಅಥವಾ ಅಭಿವೃದ್ಧಿ ಕಾರ್ಯಗಳಲ್ಲಿಯ ನಿರ್ಲಕ್ಷತನವನ್ನು ಬಂಡವಾಳ ಮಾಡಿಕೊಂಡು ಅವರನ್ನು ಹಣಿಯಲು ಸಜ್ಜಾಗಿದ್ದಾರೆ.
ನಿರಂತರ ಅತಿವೃಷ್ಠಿಯಿಂದ ರೈತರ ಬದುಕು ನಾಶವಾಗಿದೆ. ಭಾರಿ ಮಳೆಯಿಂದ ಬಿದ್ದ ಮನೆಗಳಿಗೆ ಸರಿಯಾದ ಪರಿಹಾರ ದೊರೆತಿಲ್ಲ ಎಂಬ ಕೂಗು ಕೇಳಿಬರುತ್ತಿದೆ, ಇದು ನಿಜವೂ ಹೌದು. ಮನೆ ಕಳೆದುಕೊಂಡವರಿಗೆ ಪರಿಯಾರ ದೊರಕಿಸಿಕೊಡುವಲ್ಲಿ ಬಹುತೇಕ ಮಾಜಿ ಸದಸ್ಯರು ವಿಫಲರಾಗಿದ್ದಾರೆ. ಇದು ಈ ಚುನಾಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ದೊಡ್ಡ ಆಘಾತ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಾಲ ಸಾಲು ಸೋಲುಗಳಿಂದ ಹೈರಾಣಾಗಿರುವ ಕಾಂಗ್ರೆಸ್, ಬಿಜೆಪಿಯ ವೈಫಲ್ಯಗಳನ್ನು ಯಾವ ರೀತಿ ಎನ್ ಕ್ಯಾಶ್ ಮಾಡಿಕೊಳ್ಳುವುದು ಯಕ್ಷ ಪ್ರಶ್ನೆಯಾಗಿದೆ. ಕೇವಲ ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗಿರುವ ಜಿಲ್ಲಾ ಕಾಂಗ್ರೆಸ್ ನಾಯಕರು ತಳ ಮಟ್ಟದಲ್ಲಿ ಕಣಕ್ಕಿಳಿದು ಹೋರಾಡಿದರೆ ಮಾತ್ರ ಯಶಸ್ಸು ಕಾಣಬಹುದು.
ಮೊದಲ ಹಂತದಲ್ಲಿ (ಡಿ.22 ) ಜಿಲ್ಲೆಯ ಧಾರವಾಡ, ಅಳ್ನಾವರ್ ಹಾಗೂ ಕಲಘಟಗಿ ಹಾಗೂ ಎರಡನೇ ಹಂತದಲ್ಲಿ (ಡಿ. 27 )ಹುಬ್ಬಳ್ಳಿ ಕುಂದಗೋಳ ನವಲಗುಂದ ಅಣ್ಣೀಗೇರಿ ತಾಲೂಕುಗಳಲ್ಲಿ ಮತದಾನ ನಡೆಯಲಿದೆ.
Kshetra Samachara
01/12/2020 11:06 am