ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಧಾರವಾಡ ಜಿಲ್ಲೆಯಲ್ಲಿ ಶೇ. 68.65 ರಷ್ಟು ಮತದಾನ

ಧಾರವಾಡ: ಹೆಚ್ಚೂ ಕಡಿಮೆ ಎರಡು ತಿಂಗಳಿನಿಂದ ಗರಿಗೆದರಿದ್ದ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆದು ಮತದಾನ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ.

ಉತ್ತರ ಕನ್ನಡ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳು ಈ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಳಪಡುವ ಜಿಲ್ಲೆಗಳಾಗಿವೆ. ಧಾರವಾಡ ಜಿಲ್ಲೆ ಒಂದರಲ್ಲೇ ಒಟ್ಟು 54 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಮತದಾನ ಮಧ್ಯಾಹ್ನದವರೆಗೂ ಮಂದಗತಿಯಲ್ಲಿ ಸಾಗಿತ್ತು. ಕೆಲವು ಮತಗಟ್ಟೆಗಳಲ್ಲಂತೂ ಮತದಾರರೇ ಬರದೇ ಚುನಾವಣಾ ಸಿಬ್ಬಂದಿ ಖಾಲಿ ಕುಳಿತಿದ್ದರು. ಆ ನಂತರದಲ್ಲಿ ಒಬ್ಬೊಬ್ಬರೇ ಮತದಾರರು ಬಂದು ತಮ್ಮ ಹಕ್ಕು ಚಲಾಯಿಸಿದರು.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 21549 ಪದವೀಧರ ಮತದಾರರಿದ್ದು, ಅದರಲ್ಲಿ 13282 ಜನ ಪುರುಷ, 8263 ಜನ ಮಹಿಳಾ ಹಾಗೂ 4 ಜನ ಇತರೆ ಮತದಾರರಿದ್ದಾರೆ. ಆ ಪೈಕಿ 9867 ಜನ ಪುರುಷರು ಹಾಗೂ 4926 ಜನ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದು, ಧಾರವಾಡ ಜಿಲ್ಲೆ ಒಂದರಲ್ಲೇ ಈ ಚುನಾವಣೆಗೆ ಶೇ. 68.65 ರಷ್ಟು ಮತದಾನವಾಗಿದೆ.

ಇನ್ನು ಈ ಚುನಾವಣೆ ಸಂಪೂರ್ಣ ಕೊರೊನಾ ನಿಯಮಾವಳಿಗಳ ಪ್ರಕಾರ ನಡೆದದ್ದು ವಿಶೇಷವಾಗಿತ್ತು. ಪ್ರತಿಯೊಂದು ಮತಗಟ್ಟೆಯಲ್ಲೂ ಐಸೋಲೇಷನ್ ರೂಮ್ ನೊಂದಿಗೆ ವೈದ್ಯರನ್ನೂ ನೇಮಕ ಮಾಡಲಾಗಿತ್ತು. ಚುನಾವಣಾ ಸಿಬ್ಬಂದಿ ಹಾಗೂ ಮತದಾರರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಸೂಚನೆ ಕೂಡ ನೀಡಲಾಗಿತ್ತು. ಇನ್ನು ಸಾಮಾಜಿಕ ಅಂತರದ ಮೂಲಕವೇ ಮತದಾರರು ಮತದಾನ ಮಾಡಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಗಿದ್ದು, ಅಲ್ಲಿ ನಾಲ್ಕೂ ಜಿಲ್ಲೆಗಳ ಮತಪೆಟ್ಟಿಗೆಗಳು ಜಮಾವಣೆಗೊಳ್ಳಲಿವೆ. ಆ ನಂತರ ಅದಕ್ಕೆ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗುತ್ತದೆ. ಹೀಗೆ ಸ್ಟ್ರಾಂಗ್ ರೂಮ್ ಸೇರುವ ಅಭ್ಯರ್ಥಿಗಳ ಹಣೆಬರಹ ನ.2 ರಂದು ನಿರ್ಧಾರವಾಗಲಿದೆ.

Edited By : Nagesh Gaonkar
Kshetra Samachara

Kshetra Samachara

28/10/2020 07:07 pm

Cinque Terre

24.82 K

Cinque Terre

1

ಸಂಬಂಧಿತ ಸುದ್ದಿ