ಧಾರವಾಡ: ಬಿ.ಎಸ್.ಯಡಿಯೂರಪ್ಪ ಬಹಳ ದಿನ ಮುಖ್ಯಮಂತ್ರಿಯಾಗಿ ಮುಂದುವರೆಯುವುದಿಲ್ಲ ಎಂಬ ಬಿಜೆಪಿ ಶಾಸಕ ಯತ್ನಾಳ ಅವರ ಹೇಳಿಕೆಗೆ ಡಿಸಿಎಂ ಅಶ್ವತ್ಥ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ, ಯತ್ನಾಳ ಅವರು ಈ ರೀತಿಯ ಹೇಳಿಕೆ ನೀಡಬಾರದು. ಈ ಸಂಬಂಧ ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರು ಯಾವ ರೀತಿಯ ಶಿಸ್ತಿನ ಕ್ರಮ ವಹಿಸಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.ರಾಜ್ಯದ ಎಲ್ಲ ಭಾಗಗಳಿಂದ ಎಲ್ಲರೂ ಮುಖ್ಯಮಂತ್ರಿಗಳಾಗಿದ್ದಾರೆ. ಈಗ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಆಗಬೇಕಿದೆ. ಅದು ಯಡಿಯೂರಪ್ಪನವರ ನೇತೃತ್ವದಲ್ಲಿ ಆಗಲಿದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡುವ ಮಾತುಕತೆ ನಡೆದಿಲ್ಲ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಒಂದು ಶಿಸ್ತು ಇಲ್ಲ. ಇಬ್ಬರು ಅಭ್ಯರ್ಥಿಗಳು ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿದೆ. ಕಾಲಕ್ರಮೇಣ ಆ ಪಕ್ಷದಲ್ಲಿ ನೂರಾರು ಜನ ಸಿಎಂ ಅಭ್ಯರ್ಥಿಗಳು ಹುಟ್ಟಿಕೊಳ್ಳುತ್ತಾರೆ. ಜನ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸದ್ಯ ಉಪಚುನಾವಣೆ ಹಾಗೂ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಮೇಲುಗೈ ಸಾಧಿಸಲಿದ್ದಾರೆ ಎಂದರು.ಯಾರು ಯಾವ ಪಕ್ಷ ಬಿಟ್ಟು ಬಿಜೆಪಿ ಸೇರುತ್ತೇನೆ ಎಂದು ಬರುತ್ತಾರೋ ಅವರಿಗೆ ಮುಕ್ತವಾಗಿ ಸ್ವಾಗತ ಮಾಡುತ್ತೇವೆ. ಅವರು ನಮ್ಮ ಪಕ್ಷಕ್ಕೆ ಸೇರಬೇಕೋ ಬೇಡವೋ ಎಂಬುದರ ಬಗ್ಗೆ ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
Kshetra Samachara
24/10/2020 04:15 pm