ಧಾರವಾಡ: ಜಿಲ್ಲೆಯಲ್ಲಿರುವ ಕಲ್ಲು ಪುಡಿ ಮಾಡುವ ಘಟಕಗಳು (ಕ್ರಷರ್), ಸುರಕ್ಷಾವಲಯಗಳ ಪಾಲನೆ, ಲೈಸೆನ್ಸ್ ಗಳ ನವೀಕರಣ, ಕಲ್ಲು ಗಣಿ ಗುತ್ತಿಗೆ ಮಂಜೂರಾತಿ, ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಭೂ ದಾಖಲೆಗಳ ಕಚೇರಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಗಣಿಗಾರಿಕೆ ಕಾಯ್ದೆಯ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ನೂತನ ಸಂಭಾಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಸುರಕ್ಷಾವಲಯ ಹಾಗೂ ಗಣಿ ಟಾಸ್ಕ್ ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಕಲ್ಲು ಪುಡಿಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ ನಿಯಮ-2020 ಅಡಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 56 ಕ್ರಷರ್ ಘಟಕಗಳ ಲೈಸೆನ್ಸ್ ಅವಧಿಯನ್ನು ಮೂಲ ಲೈಸೆನ್ಸ್ ಜಾರಿಯಾದ ದಿನಾಂಕದಿಂದ 20 ವರ್ಷಗಳ ಅವಧಿಗೆ ವಿಸ್ತರಿಸಲು ಒಪ್ಪಿಗೆ ನೀಡಲಾಯಿತು.
ನವೀಕರಣಕ್ಕೆ ಸ್ವೀಕೃತಿಯಾಗಿರುವ 7 ಕ್ರಷರ್ ಘಟಕಗಳ ಅರ್ಜಿಗಳ ಪೈಕಿ 6 ಅರ್ಜಿಗಳನ್ನು ನವೀಕರಿಸಲು ಸಭೆ ನಿರ್ಧರಿಸಿತು, ಓರ್ವ ಅರ್ಜಿದಾರರು ಮರಣ ಹೊಂದಿರುವುದರಿಂದ ವಾರಸುದಾರರ ವಿವರಗಳು ಕಾನೂನಾತ್ಮಕವಾಗಿ ಲಭ್ಯವಾದ ನಂತರ ನವೀಕರಿಸಲು ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದರು. 11 ನೂತನ ಅರ್ಜಿತ ಪ್ರದೇಶಗಳನ್ನು ಸುರಕ್ಷಾ ವಲಯಗಳೆಂದು ಘೋಷಿಸಿ ಇ-ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಲು ಸೂಚಿಸಲಾಯಿತು.
Kshetra Samachara
02/12/2020 10:40 pm