ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಲ್ಲದವರ ಹೊಟ್ಟೆಗೆ ಈದ್ಗಾ ವಿವಾದದ ಕೊಡಲಿ ಪೆಟ್ಟು: ಪಾರ್ಕಿಂಗ್ ಇಲ್ಲ.. ದುಡಿಮೆಯೂ ಇಲ್ಲ...!

ಹುಬ್ಬಳ್ಳಿ: ಅದು ಸಾಕಷ್ಟು ವಿವಾದ ಸೃಷ್ಟಿಸಿದ್ದ ಮೈದಾನ. ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಸದ್ದು ಮಾಡಿದ್ದ ಆ ಒಂದು ಮೈದಾನ ಈಗ ನೂರಾರು ಕುಟುಂಬದ ಕಣ್ಣೀರಿಗೆ ಕಾರಣವಾಗಿದೆ.

ಹೀಗೆ ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಿಕೊಂಡ ವಾಹನ ಚಾಲಕರು ಹಾಗೂ ಮಾಲೀಕರು. ಮೊದಲಿದ್ದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಕೋರುತ್ತಿರುವ ಸಾರಥಿಗಳು. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಈದ್ಗಾ ಮೈದಾನ.

ಸುಮಾರು ವರ್ಷಗಳಿಂದ ನೂರಾರು ಟ್ಯಾಕ್ಸಿ ಪರ್ಮಿಟ್ ವಾಹನಗಳ ನಿಲುಗಡೆ ಸ್ಥಳವಾಗಿದ್ದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಮುನ್ನೆಲೆಗೆ ಬಂದಿದ್ದೇ ತಡ ಇಲ್ಲಿನ ನೂರಾರು ಕುಟುಂಬಗಳು ಕಣ್ಣೀರು ಸುರಿಸಿವೆ. ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ವಾಹನ ಪಾರ್ಕಿಂಗ್ ತೆರವುಗೊಳಿಸಿದ್ದ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಈಗ ಟ್ಯಾಕ್ಸಿ ಪರ್ಮಿಟ್ ವಾಹನಗಳಿಗೆ ಸ್ಥಳಾವಕಾಶ ನೀಡದೇ ಇರುವ ಹಿನ್ನೆಲೆ ವಾಹನ ಚಾಲಕರು ಕಣ್ಣೀರು ಹಾಕುತ್ತಿದ್ದಾರೆ. ಈ ಮೈದಾನದಲ್ಲಿ ಪಾರ್ಕ್ ಮಾಡುವುದರಿಂದ ನಮ್ಮ ಜೀವನ ಚೆನ್ನಾಗಿತ್ತು. ಈಗ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲದ್ದರಿಂದ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಅಂತಿದ್ದಾರೆ ವಾಹನ ಚಾಲಕರು ಹಾಗೂ ಮಾಲೀಕರು.

ಇನ್ನು ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸ್ಥಳಾವಕಾಶ ನೀಡದೇ ಇರುವ ಹಿನ್ನೆಲೆಯಲ್ಲಿ ಸುಮಾರು ನೂರಾರು ಕುಟುಂಬಗಳು ಬೀದಿಗೆ ಬೀಳುವ ಭಯದಲ್ಲಿಯೇ ಜೀವನ ನಡೆಸುತ್ತಿವೆ. ಇರುವ ದುಡಿಮೆಗೆ ಈಗ ಕೊಡಲಿ ಪೆಟ್ಟು ಬಿದ್ದಿದ್ದು, ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ ಎಂದು ನೋವನ್ನು ತೋಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರು ಕೂಡಲೇ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಇಲಾಖೆಯ ನಿರ್ಧಾರವೋ ಅಥವಾ ಹೋರಾಟದ ಬಿಸಿಯೋ ಗೊತ್ತಿಲ್ಲ ಈದ್ಗಾ ಮೈದಾನದಲ್ಲಿ ಆಸರೆ ಪಡೆದುಕೊಂಡಿದ್ದ ಕುಟುಂಬಗಳಿಗೆ ಬರಸಿಡಿಲು ಬಡಿದಂತಾಗಿದ್ದು, ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಿ ಕುಟುಂಬಗಳ ಕಣ್ಣೀರು ಒರೆಸುವ ಕಾರ್ಯ ಮಾಡಬೇಕಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/09/2022 07:36 pm

Cinque Terre

76.96 K

Cinque Terre

11

ಸಂಬಂಧಿತ ಸುದ್ದಿ