ಧಾರವಾಡ: ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ ದೇಶಕ್ಕೆ ತೆರಳಿ ಅಲ್ಲಿ ಸಿಲುಕಿಕೊಂಡಿರುವ ಧಾರವಾಡ ಮೆಹಬೂಬನಗರದ ಫೌಸಿಯಾ ಮುಲ್ಲಾ ಅವರ ನಿವಾಸಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ನೀಡಿ ಆಕೆಯ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
ಸದ್ಯ ಉಕ್ರೇನ್ ದೇಶದಿಂದ ಫೌಸಿಯಾ ಅವರು ರೊಮೇನಿಯಾ ದೇಶಕ್ಕೆ ಬಂದು ಅಲ್ಲಿನ ಬುಕಾರೆಸ್ಟ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ. ನಿನ್ನೆ ಒಂದು ರಾತ್ರಿ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಅನೇಕ ಭಾರತೀಯರು ತಂಗಿದ್ದಾರೆ. ಅಲ್ಲಿ ಒಳ್ಳೆಯ ರೀತಿಯಲ್ಲಿ ಅವರಿಗೆ ಆಶ್ರಯ ಕಲ್ಪಿಸಲಾಗಿದೆ. ಉಕ್ರೇನ್ ದೇಶದಿಂದ ಬುಕಾರೆಸ್ಟ್ ವಿಮಾನ ನಿಲ್ದಾಣಕ್ಕೆ ಅವರು ಎರಡೂವರೆ ದಿನದಲ್ಲಿ ಬಂದಿದ್ದಾರೆ. ಉಕ್ರೇನ್ ಗಡಿ ದಾಟಿದಿಂದ ಅವರನ್ನು ಬುಕಾರೆಸ್ಟ್ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬರಲಾಗಿದೆ. ಈ ಬಗ್ಗೆ ಬೆಳಿಗ್ಗೆ ಫೌಸಿಯಾ ವೀಡಿಯೋ ಕಾಲ್ ಮಾಡಿ ಮಾಹಿತಿ ನೀಡಿದ್ದಾಳೆ ಎಂದು ಜಿಲ್ಲಾಧಿಕಾರಿಗಳಿಗೆ ಫೌಸಿಯಾ ತಂದೆ ಮಾಹಿತಿ ನೀಡಿದರು.
ಫೌಸಿಯಾ ಈಗ ಸುರಕ್ಷಿತವಾಗಿದ್ದಾಳೆ. ಆಕೆಯ ಜೊತೆ ಸೀನಿಯರ್‌ಗಳು ಕೂಡ ಇದ್ದಾರೆ. ಫೌಸಿಯಾ ಭಾರತಕ್ಕೆ ಬಂದಿಳಿದ ತಕ್ಷಣ ಆಕೆಯನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಫೌಸಿಯಾ ಮನೆಯವರಿಗೆ ತಿಳಿಸಿದರು.
ಅಲ್ಲದೇ ಉಕ್ರೇನ್‌ನಲ್ಲಿ ಧಾರವಾಡ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಓರ್ವ ವಿದ್ಯಾರ್ಥಿನಿ ಯುದ್ಧ ನಡೆಯುತ್ತಿರುವ ಕಾರ್ಕೀವ್‌ನಲ್ಲಿದ್ದಾಳೆ. ಕುಂದಗೋಳ ತಾಲೂಕಿನ ಯರಗುಪ್ಪಿಯ ಚೈತ್ರಾ ಕಾರ್ಕೀವ್‌ನಲ್ಲಿ ಸಿಲುಕಿದ್ದಾಳೆ. ಇನ್ನುಳಿದ ಇಬ್ಬರು ಸುರಕ್ಷಿತವಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವ ಪ್ರಯತ್ನ ನಡೆದಿದೆ. ಮುಂದಿನ ವಿಮಾನಕ್ಕೆ ಧಾರವಾಡ ನಾಲ್ಕೂ ಜನ ವಿದ್ಯಾರ್ಥಿಗಳಿಗೆ ಟಿಕೆಟ್ ಸಹ ಬುಕ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
Kshetra Samachara
02/03/2022 10:02 pm