ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೂಲಭೂತ ಸೌಕರ್ಯ ವಂಚಿತ ಸಂಗೊಳ್ಳಿ ರಾಯಣ್ಣನಗರ

ಧಾರವಾಡ: ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ನಮ್ಮ ದೇಶದ ಜನ ಇನ್ನೂ ಮೂಲಭೂತ ಸೌಕರ್ಯಗಳಿಗಾಗಿ ಅಧಿಕಾರಿಗಳು ಹಾಗೂ ನಮ್ಮನ್ನಾಳುವ ಜನಪ್ರತಿನಿಧಿಗಳ ಮುಂದೆ ಕೈ ಚಾಚಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ವಚ್ಛ ಭಾರತ ಎಂದು ಈ ದೇಶದ ಪ್ರಧಾನಿಗಳು ಹೇಳುತ್ತಲೇ ಬಂದಿದ್ದರೂ ಆ ಸ್ವಚ್ಛ ಭಾರತ ಇನ್ನೂ ಕನಸಿನ ಮಾತಾಗಿಯೇ ಉಳಿದಿದೆ.

ಹೌದು! ಆಧುನಿಕತೆ ಬೆಳೆದಂತೆ ನಗರಗಳೂ ಬೆಳೆಯುತ್ತಿವೆ. ನಗರಗಳಿದ್ದಲ್ಲಿ ಜನವಸತಿ ಇರಲೇಬೇಕು. ಜನವಸತಿ ಇದ್ದಲ್ಲಿ ಸೌಕರ್ಯಗಳು ಇರಲೇಬೇಕಲ್ಲವೇ? ಅಲ್ಲಿ ವಾಸಿಸುವ ಜನರಿಗೆ ಮತದಾನದ ಹಕ್ಕು ಇದೆ ಎಂದಾದರೆ ಮೂಲಭೂತ ಸೌಕರ್ಯಗಳನ್ನು ಪಡೆಯುವ ಹಕ್ಕೂ ಅವರಿಗಿರುತ್ತದೆ. ಆದರೆ, ಧಾರವಾಡದ ಸಂಗೊಳ್ಳಿ ರಾಯಣ್ಣನಗರದ ಲಾಸ್ಟ್‌ ಸ್ಟಾಪ್ ಕಡೆ ಇರುವ ಜನ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಮಳೆಯಾದರೆ ಅಂಗೈಯಲ್ಲಿ ಜೀವ ಹಿಡಿದು ಬದುಕುತ್ತಿದ್ದಾರೆ. ಇದು ವಿಚಿತ್ರವಾದರೂ ವಾಸ್ತವಿಕ.

ಇದು ಸಂಗೊಳ್ಳಿ ರಾಯಣ್ಣ ನಗರದ ಲಾಸ್ಟ್ ಸ್ಟಾಪ್. ಸಂಪೂರ್ಣ ತಗ್ಗು ಪ್ರದೇಶದಲ್ಲಿರುವ ಇಲ್ಲಿನ ನಿವಾಸಿಗಳಿಗೆ ರಸ್ತೆಯ ಸೌಲಭ್ಯವಿಲ್ಲ. ರಸ್ತೆ ಇಲ್ಲದೇ ಇದ್ದಿದ್ದಕ್ಕೆ ಏರಿಯಾದಲ್ಲಿ ಸಂಪೂರ್ಣ ಪೊದೆ ಬೆಳೆದು ಇಲ್ಲಿನ ಜನ ಕಾಡಿನಲ್ಲಿ ವಾಸಿಸುವಂತಾಗಿದೆ.

ವಾರ್ಡ್ ನಂಬರ್ 20 ರ ಈ ಏರಿಯಾದಲ್ಲಿ ಪ್ರಮುಖವಾಗಿ ರಸ್ತೆಯದ್ದೇ ದೊಡ್ಡ ಸಮಸ್ಯೆ. ದೊಡ್ಡ ಮಳೆಯಾದರೆ ನೀರು ಎಲ್ಲರ ಮನೆಗಳಿಗೂ ಹೊಕ್ಕು ಮನೆಗಳು ಸಂಪೂರ್ಣ ಜಲಾವೃತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ರಸ್ತೆ ಮಾಡಿಸಿಕೊಡಿ ಅಂತ ಇಲ್ಲಿನ ನಿವಾಸಿಗಳು ಪಾಲಿಕೆಗೆ ಮನವಿಯನ್ನೂ ಮಾಡಿದ್ದಾರೆ. ಆದರೆ, ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ. ಸ್ಥಳೀಯರೇ ತಮ್ಮ ಸ್ವಂತ ಹಣದಲ್ಲಿ ಮಣ್ಣು ಹಾಕಿಸಿಕೊಂಡು ರಸ್ತೆ ಮಾಡಿಸಿಕೊಂಡಿದ್ದಾರೆ.

ಚರಂಡಿ, ವಿದ್ಯುತ್ ದೀಪ, ಕಸದ ಸಮಸ್ಯೆ ಈ ವಾರ್ಡಿನಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಈ ವಾರ್ಡಿನ ಪಾಲಿಕೆ ಸದಸ್ಯೆ ಕವಿತಾ ಕಬ್ಬೇರ ಅವರು ಬಂದು ಸಮಸ್ಯೆ ನೋಡುವುದಾಗಿ ತಿಳಿಸಿದ್ದಾರಂತೆ. ಆದರೆ, ಇಂದಿಗೂ ಯಾರೂ ಇವರ ಸಮಸ್ಯೆಗೆ ಸ್ಪಂದಿಸಿಲ್ಲ. ಸಮಸ್ಯೆಗಳ ಕಣಜವಾಗಿರುವ ಈ ಸಂಗೊಳ್ಳಿ ರಾಯಣ್ಣ ನಗರದ ಲಾಸ್ಟ್ ಸ್ಟಾಪ್ ನಿವಾಸಿಗಳ ಕಷ್ಟಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತುರ್ತು ಸ್ಪಂದಿಸಬೇಕಾದ ಅನಿವಾರ್ಯತೆ ಇದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Nagesh Gaonkar
Kshetra Samachara

Kshetra Samachara

16/09/2022 09:57 pm

Cinque Terre

41.73 K

Cinque Terre

6

ಸಂಬಂಧಿತ ಸುದ್ದಿ