ಕಲಘಟಗಿ : ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆ ತುಂಬಿ ಸೇತುವೆ ಮೇಲೆ ಹರಿಯುತ್ತಿದ್ದು ಗ್ರಾಮಸ್ಥರು ಸೇತುವೆ ಮೇಲೆ ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಸೇತುವೆ ಮೇಲೆ ಬಾಲಕಿ ಜಾರಿಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾಧಿಕಾರಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೇತುವೆಯನ್ನು ಎತ್ತರಕ್ಕೆ ಮಾಡಿಸುವುದಾಗಿ ಆಶ್ವಾಸನೆ ನೀಡಿ ಹೋಗಿದ್ರು..
ಆನಂತರ ಇಲ್ಲಿಗೆ ಯಾವುದೇ ಅಧಿಕಾರಿಗಳಾಗಲೀ, ರಾಜಕೀಯ ಮುಖಂಡರಾಗಲೀ ಭೇಟಿ ನೀಡಿಲ್ಲ. ಇಲ್ಲಿ ಪ್ರತಿನಿತ್ಯ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಓಡಾಡಲು ಸಮಸ್ಯೆಯಾಗಿದ್ದು, ಎಷ್ಟೋ ಜನರು ಈ ಸೇತುವೆ ಮೇಲೆ ಕಾಲು ಜಾರಿ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಂದೊಂದು ದಿನ ಮತ್ತೊಂದು ಜೀವ ಬಲಿ ಪಡೆಯುವ ಮುಂಚೆ ಕೂಡಲೇ ಈ ಸೇತುವೆಯನ್ನು ಎತ್ತರಕ್ಕೆ ಏರಿಸಿ ಮುಂದೆ ಆಗುವ ಅನಾಹುತಗಳನ್ನು ತಡೆಯಬೇಕೆಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
31/08/2022 11:14 am