ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಮಸ್ಯೆಗಳ ಆಗರ ವಾರ್ಡ್ ನಂ. 49 ಚೆನ್ನಮ್ಮ ಕಾಲೋನಿ; ಕಣ್ಮುಚ್ಚಿ ಕುಳಿತ ಪಾಲಿಕೆ

ಹುಬ್ಬಳ್ಳಿ: ನಮ್ಮ ಏರಿಯಾದಾಗ್‌ ರೋಡಿಲ್ಲ, ಚರಂಡಿ ಇಲ್ಲ. ಕಸ ವಿಲೇವಾರಿ ಆಗ್ತಿಲ್ಲ. ವಿದ್ಯುತ್‌ ಕಂಬಗಳಿದ್ದರೂ ಲೈಟ್‌ ಹತ್ತುತ್ತಿಲ್ಲ. ನಮ್‌ ಸಮಸ್ಯೆ ಬಗೆಹರಿಸ್ರಿ ಇದು ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 49ರ ನಿವಾಸಿಗಳ ಅಳಲು.

ಪಾಲಿಕೆಯ 49ನೇ ವಾರ್ಡ್ ನಲ್ಲಿ ಬರುವ ರಾಣಿ ಚೆನ್ನಮ್ಮ ಕಾಲೋನಿ ನಿರ್ಮಾಣಗೊಂಡು 13 ವರ್ಷಗಳು ಕಳೆದಿವೆ. ಇಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ಇವೆ. ಆದರೆ, ಬಡಾವಣೆಗೆ ಈವರೆಗೆ ಮುಖ್ಯ ರಸ್ತೆಯಾಗಲಿ ಅಥವಾ ಸಂಪರ್ಕ ರಸ್ತೆಗಳಾಗಲಿ ಅಭಿವೃದ್ಧಿ ಕಂಡಿಲ್ಲ.

ಇಲ್ಲಿನ ನಿವಾಸಿಗಳೇ ದುಸ್ಥಿತಿ ಕಂಡು ಸ್ವತಃ ಹಣ ಹಾಕಿ ರಸ್ತೆಗೆ ಮಣ್ಣು ತಂದು ಸುರಿದಿದ್ದನ್ನು ಬಿಟ್ಟರೇ ಈವರೆಗೆ ಪಾಲಿಕೆಯಿಂದ ಯಾವೊಂದು ಅಭಿವೃದ್ಧಿ ಕಾರ್ಯ ಆಗಿಲ್ಲ. ಇಲ್ಲಿನ ಕಾರ್ಪೊರೇಟರ್ ಕೂಡ ಕಾಣೆಯಾಗಿದ್ದಾರೆ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ. ಹೀಗಾಗಿಯೇ ಮಣ್ಣಿನ ರಸ್ತೆಯಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿ ಈ ಬಡಾವಣೆಯ ನಿವಾಸಿಗಳದ್ದಾಗಿದೆ.

ಇಷ್ಟು ವರ್ಷ ಕಳೆದರೂ ಸಹ ಇನ್ನೂ ಎಷ್ಟೋ ಕಡೆ ಚರಂಡಿಗಳು ನಿರ್ಮಾಣ ವಾಗಿಲ್ಲ. ಮಳೆ ಬಿದ್ದರೆ ರಸ್ತೆ ಕೆಸರುಮಯಗೊಂಡು ಕೆರೆಯಂತಾಗುತ್ತಿದೆ. ಕೆಲವು ಕಡೆಗೆ ಗಿಡಗಂಟಿಗಳು ಬೆಳೆದು ನಿಂತಿದ್ದು, ವಿಷಜಂತುಗಳ ಆವಾಸ ಸ್ಥಾನವಾಗಿದೆ. ನಿಂತ ನೀರಿನಿಂದ ಸೂಸುವ ದುರ್ವಾಸನೆ, ಹದಗೆಟ್ಟ ರಸ್ತೆಯ ನಡುವೆಯೇ ಮಕ್ಕಳು ಶಾಲೆಗೆ ನಡೆದು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆದರೆ, ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದರಿಂದಾಗಿ ಈ ಕಾಲೋನಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ನಿವಾಸಿಗಳು ನಿತ್ಯ ಸಮಸ್ಯೆಗಳ ಸರಮಾಲೆಯಲ್ಲಿ ಬದುಕು ನಡೆಸುವಂತಾಗಿದೆ. ಈಗಲಾದರೂ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ವಾರ್ಡ್ ಸಮಸ್ಯೆ ಬಗೆಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

Edited By : Manjunath H D
Kshetra Samachara

Kshetra Samachara

17/07/2022 12:45 pm

Cinque Terre

110.34 K

Cinque Terre

9

ಸಂಬಂಧಿತ ಸುದ್ದಿ