ಧಾರವಾಡ: ಜಿಲ್ಲಾ ಕೇಂದ್ರ ಧಾರವಾಡದಿಂದ ಕೂಗಳತೆ ದೂರದಲ್ಲಿರುವ ಹುಣಸಿಕುಮರಿ ಗ್ರಾಮದ ಸಮಸ್ಯೆ ಹಾಗೂ ಆ ಗ್ರಾಮಕ್ಕೆ ರಸ್ತೆ ಸಂಪರ್ಕದ ಬಗ್ಗೆ ಕಳೆದ ಜೂನ್ ತಿಂಗಳಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾಲು ಸಾಲು ಸುದ್ದಿಯನ್ನು ಬಿತ್ತರಿಸಿತ್ತು. ಆ ಸುದ್ದಿಗೆ ಇದೀಗ ಪ್ರತಿಫಲ ದೊರೆತಿದೆ.
ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಹುಣಸಿಕುಮರಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಮೊದಲು ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಇರಲಿಲ್ಲ ಎಂತಲ್ಲ. ಕಾಡಿನ ಮಧ್ಯೆ ಕಾಡು ಪ್ರಾಣಿಗಳಂತೆ ಈ ಹುಣಸಿಕುಮರಿ ಗ್ರಾಮದ ಜನ ಕಚ್ಚಾ ರಸ್ತೆಯಲ್ಲಿ ಸಂಚರಿಸಬೇಕಾಗಿತ್ತು. ಈ ರಸ್ತೆಯ ಬಗ್ಗೆ ಹಾಗೂ ಹುಣಸಿಕುಮರಿ ಗ್ರಾಮದಲ್ಲಿನ ಅನೇಕ ಸಮಸ್ಯೆಗಳ ಮೇಲೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳೆದ 9 ತಿಂಗಳ ಹಿಂದೆ ಬೆಳಕು ಚೆಲ್ಲಿತ್ತು.
ಈ ಬಗ್ಗೆ ಮುತುವರ್ಜಿ ವಹಿಸಿದ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣವರ ಆ ರಸ್ತೆಗೆ ಸರ್ಕಾರದಿಂದ ಹುಣಸಿಕುಮರಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಈ ಹಿಂದೆ ಸಂತೋಷ ಲಾಡ್ ಅವರು ಕಲಘಟಗಿ ಶಾಸಕರಾಗಿದ್ದಾಗ ಈ ಗ್ರಾಮಕ್ಕೆ ರಸ್ತೆ ಮಾಡಿಸಲು ಅನುದಾನ ಮಂಜೂರು ಮಾಡಿಸಿದ್ದರಂತೆ ಆದರೆ, ಆ ಅನುದಾನ ಬೇರೆ ಕಡೆ ಬಳಕೆ ಮಾಡಿದ್ದರಿಂದ ಹುಣಸಿಕುಮರಿ ಗ್ರಾಮದ ಜನ ರಸ್ತೆಯಿಂದ ವಂಚಿತರಾಗಿದ್ದರು.
ಧಾರವಾಡ ತಾಲೂಕು ವ್ಯಾಪ್ತಿಯಲ್ಲಿ ಬರುವ ಕಲಕೇರಿ ಗ್ರಾಮದಿಂದ ಹುಣಸಿಕುಮರಿ ಗ್ರಾಮದವರೆಗೆ ಒಟ್ಟು 4.10 ಕಿಲೋ ಮೀಟರ್ ರಸ್ತೆ ಮಾಡಿಸಲು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅನುಮೋದನೆ ನೀಡಿದ್ದಾರೆ.
ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗಳ ಸುಧಾರಣೆ ಯೋಜನೆಯಡಿ ಒಟ್ಟು 460 ಲಕ್ಷ ರೂಪಾಯಿ ಮೊತ್ತದಲ್ಲಿ ಇಲ್ಲಿ ರಸ್ತೆ ನಿರ್ಮಾಣವಾಗಲಿದೆ. ಒಟ್ಟಾರೆ ಸ್ವಾತಂತ್ರ್ಯ ನಂತರ ಹುಣಸಿಕುಮರಿ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದ್ದು, ಆ ಗ್ರಾಮದ ಜನ ಕಾಡು ಪ್ರಾಣಿಗಳಂತೆ ಕಾಡಿನ ಮಧ್ಯೆ ಸಂಚರಿಸುವ ಕಾಲ ದೂರವಾಗಲಿದೆ.
Kshetra Samachara
21/02/2021 10:06 pm