ಹುಬ್ಬಳ್ಳಿ: ಕೇಂದ್ರ ಸರ್ಕಾರದ ಬಜೆಟ್ ಮೇಲೆ ಈ ಬಾರಿ ಬಹಳಷ್ಟು ನಿರೀಕ್ಷೆಗಳ ದೃಷ್ಟಿ ನೆಟ್ಟಿದ್ದು,ಸುಮಾರು ವರ್ಷಗಳ ನಿರೀಕ್ಷಿತ ರೈಲ್ವೆ ಯೋಜನೆಗಳು ಕೇಂದ್ರ ಸರ್ಕಾರದ ಬಜೆಟ್ ಮೇಲೆ ನಿರ್ಧಾರವಾಗಲಿವೆ ಎಂಬುವಂತ ಆಶಾದಾಯಕ ಭಾವನೆಯನ್ನು ರಾಜ್ಯದ ಜನರು ಇಟ್ಟಿದ್ದಾರೆ.ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರು ಮಾತ್ರ ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್ ಮೇಲೆ ಬೆಟ್ಟದಷ್ಟು ಆಸೆಗಳನ್ನು ಇಟ್ಟುಕೊಂಡಿದ್ದಾರೆ.
ನೈಋತ್ಯ ರೈಲ್ವೆ ವಲಯದ ಬಹುತೇಕ ಕಾರ್ಯ ಯೋಜನೆಗಳು ಕೇಂದ್ರ ಸರ್ಕಾರದ ಬಜೆಟ್ ಎದುರು ನೋಡುತ್ತಿವೆ.ಈ ಬಾರಿ ನಡೆಯಲಿರುವ ಕೇಂದ್ರ ಬಜೆಟ್ ಉತ್ತರ ಕರ್ನಾಟಕ ಭಾಗದ ಜನರಿಗೆ ವರವಾಗಲಿದೆ ಎಂಬುವುದು ಉತ್ತರ ಕರ್ನಾಟಕ ಭಾಗದ ಜನರ ಭರವಸೆಯಾಗಿದೆ.ರಾಜ್ಯದ ಮಹತ್ವಪೂರ್ಣ ರೈಲ್ವೆ ಯೋಜನೆಯಲ್ಲಿ ಒಂದಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ 1996ರಲ್ಲಿಯೇ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದ್ದರೂ ಕೂಡ ಇದುವರೆಗೆ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ.ಈ ಬಾರಿ ಬಜೆಟ್ ಈ ಕನಸನ್ನು ಸಾಕಾರಗೊಳಿಸಲಿದೆಯೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಇನ್ನೂ ಕಾನೂನು ತೊಡಕುಗಳು ನಿವಾರಣೆಯಾಗಿದ್ದು,ಈ ಬಾರಿ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ಇನ್ನೂ ನೈಋತ್ಯ ರೈಲ್ವೆ ವಲಯದಲ್ಲಿ ಹತ್ತು ಹಲವಾರು ಯೋಜನೆಗಳಿಗೆ ಕೇಂದ್ರ ಬಜೆಟ್ ವರವಾಗಬೇಕಿದೆ. ಬಹುನಿರೀಕ್ಷಿತ ಯೋಜನೆಯಾಗಿರುವ ಗದಗವಾಡಿ ಗದಗ-ಯಲವಿಗಿ ಹೊಸ ಮಾರ್ಗದ ಯೋಜನೆಗೆ ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಕೈಗೆತ್ತಿಕೊಳ್ಳಬೇಕು. ಇದರಿಂದ ಸಾರ್ವಜನಿಕ ವಲಯಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿದೆ.ಈ ಹಿಂದೆಯಷ್ಟೇ ಕೇಂದ್ರ ರೈಲ್ವೆ ಸಚಿವರು ಸೂಚನೆ ನೀಡಿದ್ದ ಗದಗವಾಡಿ ಗದಗ-ಯಲವಿಗಿ ರೈಲ್ವೆ ಹೊಸ ಮಾರ್ಗದ ಕಾರ್ಯವನ್ನು ಈ ಬಾರಿ ಬಜೆಟ್ ಪೂರಕವಾಗಿ ಪ್ರೋತ್ಸಾಹಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ.ಅಲ್ಲದೇ ಧಾರವಾಡ ಬೆಳಗಾವಿ ಹೊಸ ಲೈನ್ ಗೆ ಬಜೆಟ್ ನಲ್ಲಿ ಹಣವನ್ನು ಮೀಸಲಿಟ್ಟು ಯೋಜನೆ ಜಾರಿ ಮಾಡಬೇಕಿದೆ.
ಇನ್ನೂ ತುಮಕೂರು, ಚಿತ್ರದುರ್ಗ, ದಾವಣಗೆರೆ ಲೈನ್ ಅಭಿವೃದ್ಧಿ ಕಾರ್ಯಗಳು ಕೂಡ ಈ ಬಾರಿ ಬಜೆಟ್ ನಿರೀಕ್ಷೆಯಲ್ಲಿವೆ.ಇನ್ನೂ ಸಾಕಷ್ಟು ಜನಪರ ಯೋಜನೆಗಳು ರೈಲ್ವೆ ವಲಯದಲ್ಲಿ ಬಜೆಟ್ ಗಾಗಿ ಕಾಯುತ್ತಿದ್ದು,ಕೇಂದ್ರ ಸರ್ಕಾರ ನೈಋತ್ಯ ರೈಲ್ವೆ ವಲಯದ ಯೋಜನೆಗಳ ಬಗ್ಗೆ ಮುತುವರ್ಜಿ ವಹಿಸಿ ಹೆಚ್ಚಿನ ಆದ್ಯತೆ ನೀಡಬೇಕಿದೆ.
Kshetra Samachara
22/01/2021 08:13 am