ಧಾರವಾಡ: ಧಾರವಾಡದಲ್ಲಿ ಬಹಳ ಹಳೆಯ ಕೆರೆ ಎಂದರೆ ಅದು ಕೆಲಗೇರಿ ಕೆರೆ. ನಗರದ ಐತಿಹಾಸಿಕ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಕೆರೆ ನಶಿಸುತ್ತಿದೆ ಎಂಬ ಮಾತು ಕೇಳುತ್ತಲೇ ಇತ್ತು. ಇದೀಗ ಅಭಿವೃದ್ಧಿ ಕಾರ್ಯ ನಡೆಸಿ ಹೊಸ ಕಾಯಕಲ್ಪ ನೀಡಲು ಸರ್ಕಾರ ಮುಂದಾಗಿದ್ದು, ಕೆಲ ದಿನಗಳಲ್ಲೇ ಕೆರೆಯ ಸಂಪೂರ್ಣ ಚಿತ್ರಣ ಬದಲಾಗಲಿದೆ.
ಸರ್.ಎಂ.ವಿಶ್ವೇಶ್ವರಯ್ಯ ನಿರ್ಮಿಸಿರುವ ಕೆಲಗೇರಿ ಕೆರೆ ಸುಮಾರು 170 ಎಕರೆ ವಿಸ್ತೀರ್ಣ ಹೊಂದಿದೆ. ಕೆಲ ವರ್ಷಗಳ ಹಿಂದೆ ಕೆರೆ ಅಭಿವೃದ್ಧಿ ನಡೆಸಿ ವಾಯುವಿಹಾರಿಗಳಿಗೆ ವಾಕಿಂಗ್ ಪಾಥ್ ನಿರ್ಮಿಸಲಾಗಿತ್ತು. ಅಲ್ಲಲ್ಲಿ ಜನರು ಕೂರಲು ಸಿಮೆಂಟ್ ಕುರ್ಚಿಗಳನ್ನು ಹಾಗೂ ಕೆರೆಯ ದಂಡೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ದಿನಗಳು ಉರುಳಿದಂತೆ ಇವೆಲ್ಲಾ ಕಿತ್ತುಕೊಂಡು ಹೋಗಿದ್ದವು. ಇದೇ ಕಾರಣಕ್ಕೆ ಮತ್ತೆ ಈ ಕೆರೆಗೆ ಕಾಯಕಲ್ಪ ನೀಡುವ ದೃಷ್ಟಿಯಿಂದ, ದಂಡೆಯ ಮೇಲಿನ ಮಾರ್ಗವನ್ನು ಅಗಲೀಕರಣ ಮಾಡಿ ಓಪನ್ ಜಿಮ್ ಸ್ಥಾಪಿಸಲಾಗುತ್ತಿದೆ. ಈ ಮೊದಲಿದ್ದ 10 ಅಡಿ ಅಗಲದ ವಾಕಿಂಗ್ ಪಾಥ್‌ನ್ನು 30 ಅಡಿಗೆ ವಿಸ್ತರಿಸಲಾಗುತ್ತಿದ್ದು, ಸುಮಾರು 5 ಅಡಿ ಜಾಗದಲ್ಲಿ ಜಿಮ್ ಪರಿಕರ ಸ್ಥಾಪನೆ, 4 ಅಡಿಯಲ್ಲಿ ಕಟ್ಟೆ ನಿರ್ಮಾಣ, ಉಳಿದ ಜಾಗೆಯನ್ನು ವಾಯುವಿಹಾರಕ್ಕೆ ಮೀಸಲಿಡಲಾಗಿದೆ.
ಅಮೃತ ಯೋಜನೆಯ ಹಸಿರು ವಲಯ ಪ್ರದೇಶ ಅಭಿವೃದ್ಧಿ ಅಡಿ 2.05 ಕೋಟಿ ರೂಪಾಯಿ ಅನುದಾನದಲ್ಲಿ ಈ ಕಾರ್ಯ ನಡೆದಿದೆ. 2019ರಲ್ಲೇ ಈ ಯೋಜನೆಯ ನೀಲನಕ್ಷೆ ಸಿದ್ಧಪಡಿಸಿ ಕೆಲಸ ಆರಂಭಿಸಲಾಗಿತ್ತು. ಆಗ ಕೊರೊನಾ ಮೊದಲ ಅಲೆ ಜೋರಾಗಿದ್ದ ಕಾರಣ ಕಾಮಗಾರಿ ಸ್ಥಗಿತವಾಗಿತ್ತು. ಈ ಸಮಯದಲ್ಲಿ ಶಾಸಕ ಅರವಿಂದ ಬೆಲ್ಲದ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಿ ಹೈಟೆಕ್ ಸ್ಪರ್ಶ ನೀಡಿದ್ದರು. ಬಳಿಕ ಆರಂಭವಾದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ನೀಡುವ ಕೆಲಸ ನಡೆದಿದೆ. ಕೆಲ ದಿನಗಳಲ್ಲೇ ಜನರ ಬಳಕೆಗೆ ಇದು ತೆರೆದುಕೊಳ್ಳಲಿದೆ.
ಕೆರೆ ದಂಡೆ ಮೇಲೆ ವಾಯು ವಿಹಾರ ನಡೆಸುವ ಜನರ ವ್ಯಾಯಾಮಕ್ಕೆ ಕೆಲ ಪರಿಕರಗಳನ್ನು ಅಳವಡಿಸಲಾಗುತ್ತಿದೆ. ಇದರ ಜೊತೆಗೆ ಮಕ್ಕಳಿಗೆ ಆಟಿಕೆಗಳನ್ನೂ ಅಳವಡಿಸಲಾಗುತ್ತಿದೆ. ವ್ಯಾಯಾಮಕ್ಕೆ ಕ್ರಾಸ್ ವಾಲ್ಕರ್, ಲೆಗ್ ಪ್ರೆಸ್, ಸೈಕಲ್, ಸಿಟೆಡ್ ಚೆಸ್ಟ್ ಪ್ರೆಸ್, ಥೈ ಚೈ ವೀಲ್, ಲೆಗ್ ಆ್ಯಂಡ್ ಥೈ ಎಕ್ಸರ್ ಸೈಜ್, ಪುಲ್‌ಅಪ್ ಚೇರ್ ಸೇರಿ ಇನ್ನೂ ಕೆಲ ಪರಿಕರಗಳನ್ನು 2 ಸೆಟ್‌ಗಳಂತೆ ಅಳವಡಿಸಲಾಗಿದೆ. ಮಕ್ಕಳ ಆಟಕ್ಕಾಗಿಯೂ ಪರಿಕರಗಳನ್ನು ಅಳವಡಿಸಲಾಗಿದೆ.
ಈ ಕೆರೆ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದಕ್ಕೆ ಕೆಲಗೇರಿ ನಿವಾಸಿಗಳು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಧಾರವಾಡದ ಸಂಪತ್ತು ಉಳಿಸಿ ಬೆಳೆಸುವುದರ ಜೊತೆಗೆ ಜನರಿಗೆ ಪ್ರಯೋಜನವಾಗಲಿ ಎಂಬ ದೃಷ್ಟಿಯಿಂದ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ವಾಯು ವಿಹಾರಕ್ಕೆ ಕಿರಿದಾದ ಜಾಗೆ ಇತ್ತು. ಆ ಜಾಗವನ್ನು ಅಗಲೀಕರಣ ಮಾಡುವುದರ ಜತೆಗೆ ವ್ಯಾಯಾಮದ ಪರಿಕರಗಳನ್ನು ಅಳವಡಿಸಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಜನರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಇವುಗಳ ರಕ್ಷಣೆ ಬಗ್ಗೆಯೂ ಜನರು ಗಮನ ಹರಿಸಬೇಕು ಎಂಬುದು ಪಬ್ಲಿಕ್ ನೆಕ್ಸ್ಟ್ ಕಳಕಳಿ.
Kshetra Samachara
15/09/2021 04:07 pm