ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಯಾವುದೇ ಕಾಮಗಾರಿಗಳಿಗಾಗಲಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಆರಂಭದಲ್ಲಿ ಇರುವ ಉತ್ಸಾಹ ಕಾಮಗಾರಿ ಮುಗಿದ ಮೇಲೆ ಇರುವುದೇ ಇಲ್ಲ. ಕಾಮಗಾರಿಗೆ ಅನುಮೋದನೆ ದೊರೆತು, ಅದು ಮುಕ್ತಾಯವಾಗುವವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರಂತರವಾಗಿ ಅಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಯಾವಾಗ ಕಾಮಗಾರಿ ಮುಗಿಯುತ್ತದೋ, ಅವರು ಕೂಡ ಅಲ್ಲಿಗೆ ಬರುವುದನ್ನು ನಿಲ್ಲಿಸಿ ಬಿಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗಿರುವ ಮೀನು ಮಾರುಕಟ್ಟೆ.
ಹೌದು,,, ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ಮೀನು ಮಾರುಕಟ್ಟೆ ನಿರ್ಮಿಸಲಾಗಿದೆ. ನಿರ್ಮಾಣವಾಗಿ ಐದು ತಿಂಗಳು ಕಳೆದರೂ ಕೂಡ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಇದರಿಂದ ಮೀನು ವ್ಯಾಪಾರಸ್ಥರು ಬಯಲಿನಲ್ಲೇ ಬಿಸಿಲು, ಮಳೆ ಎನ್ನದೆ ಸಂತೆ ನಡೆಸುವಂತಾಗಿದೆ. ಇನ್ನು ಹಲವು ವರ್ಷಗಳ ಇತಿಹಾಸ ಹೊಂದಿದ ಈ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ವಾಹನಗಳಿಂದ ಮೀನು ಇಳಿಸಲು, ನೀರಿನ ತೊಟ್ಟಿ, ಶೌಚಗೃಹ- ಹೀಗೆ ಸಕಲ ಸೌಲಭ್ಯ ನೀಡಲಾಗಿದೆ. ಆದರೆ ಇಷ್ಟೆಲ್ಲ ಸೌಲಭ್ಯದ ಯೋಜನೆ ಸಿದ್ಧವಾಗಿದ್ದರೂ ವ್ಯಾಪಾರಸ್ಥರಿಗೆ ಅದು ಕನ್ನಡಿಯೊಳಗಿನ ಗಂಟಿನಂತಾಗಿದೆ. 2022 ಜನವರಿಗೆ ಮಾರುಕಟ್ಟೆ ಪೂರ್ಣಗೊಂಡಿದ್ದರೂ, ಇದುವರೆಗೂ ಉದ್ಘಾಟನೆಗೆ ಕಾಲ ಮಾತ್ರ ಕೂಡಿ ಬಂದಿಲ್ಲ. ಇದರಿಂದ ಮೀನು ವ್ಯಾಪಾರಸ್ಥರು ಯಾವಾಗ ಮಾರುಕಟ್ಟೆ ಉದ್ಘಾಟನೆ ಆಗುತ್ತದೆಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಹೀಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಕಟ್ಟಡ ಉದ್ಘಾಟನೆಯಾಗುತ್ತಿಲ್ಲ. ಒಂದೆಡೆ ವ್ಯಾಪಾರಿಗಳು ಮೂಲ ಸೌಕರ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತೊಂದು ಕಡೆ ಕಟ್ಟಡ ಧೂಳು ಹಿಡಿಯುತ್ತಿದೆ. ಆದ್ರು ಕೂಡ ಸ್ಮಾರ್ಟ್ ಅಧಿಕಾರಿಗಳು ಉದ್ಘಾಟನೆಗೆ ಬಗ್ಗೆ ಏನ ಹೇಳ್ತಾರೆ ಕೇಳಿ.
ಏನೇ ಆಗಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಆದಷ್ಟು ಬೇಗನೇ ಈ ಮಾರುಕಟ್ಟೆ ಉದ್ಘಾಟನೆ ಮಾಡಿಕೊಟ್ಟು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ರೆ ಮೀನು ಮಾರುಕಟ್ಟೆಯನ್ನು ನಿರ್ಮಾಣಗೊಂಡಿದ್ದಕ್ಕು ಸಾರ್ಥಕವಾಗುತ್ತದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/10/2022 01:13 pm