ಅಣ್ಣಿಗೇರಿ: ರೈತರು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ತಮ್ಮ ಜಮೀನುಗಳನ್ನು ಹದ ಮಾಡಿಕೊಂಡು ಈ ತಿಂಗಳು ಕೊನೆ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಬಿತ್ತಲು ತಯಾರಿ ನಡೆಸುತ್ತಿದ್ದಾರೆ.
ರೈತನಿಗೆ ಪ್ರಮುಖವಾಗಿ ಬೇಕಾಗಿರುವುದು ಬಿತ್ತನೆ ಮಾಡಲು ಬೀಜಗಳು. ಈ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳ ರೈತರು ಹೆಸರು,ಉದ್ದು, ತೊಗರಿ ಖರೀದಿ ಮಾಡಲು ರೈತ ಸಂಪರ್ಕ ಕೇಂದ್ರದಲ್ಲಿ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಸಬ್ಸಿಡಿ ದರದಲ್ಲಿ ಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದವು.
ಸರ್ಕಾರ ತಾಲೂಕಿನಲ್ಲಿ ರೈತರಿಗೆ ಸಮಸ್ಯೆ ಆಗಬಾರದೆಂಬ ಹಿತದೃಷ್ಟಿಯಿಂದ 2 ಸಂಪರ್ಕ ಕೇಂದ್ರಗಳಲ್ಲಿ ಅಣ್ಣಿಗೇರಿ ಮತ್ತು ಶಲವಡಿಯಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಅವಕಾಶ ಕಲ್ಪಿಸಿದೆ. ಇನ್ನೂ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಕಳೆದ ಎರಡು ದಿನಗಳಿಂದ ಬೀಜಗಳನ್ನು ವಿತರಣೆ ಮಾಡುತ್ತಿದ್ದು, ಒಟ್ಟು ತಾಲೂಕಿನಲ್ಲಿ 196.6 ಕ್ವಿಂಟಾಲ್ ಹೆಸರು,2.40 ಕ್ವಿಂಟಾಲ್ ಉದ್ದು, 2.40 ಕ್ವಿಂಟಾಲ್ ತೊಗರಿ ಬಂದಿದೆ.
ಈ ಸಲ ತಾಲೂಕಿನಲ್ಲಿ ಅಂದಾಜು ಎಂಟು ಸಾವಿರದ ಎರಡು ನೂರು ಹೆಕ್ಟರ್ ನಷ್ಟು ಹೆಸರು ಬಿತ್ತನೆ ಆಗಬಹುದು. ಈ ದಿಸೆಯಿಂದ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಕೃಷ್ಣ ಗೌಡ ಪಾಟೀಲ್ ಅವರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
Kshetra Samachara
25/05/2022 09:46 pm