ಹುಬ್ಬಳ್ಳಿ: ನಗರದ ಬಂಕಾಪುರ ಚೌಕದಲ್ಲಿರುವ ಶ್ರೀಶೈಲ ಮಠದಲ್ಲಿ ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ಆಯೋಜಿಸಿದ 'ವಿದ್ಯಾರ್ಥಿ ಮಿತ್ರ... ನಿಮ್ಮ ರಜತ' ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ 60,000 ನೋಟ್‌ಬುಕ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಾನಿಧ್ಯ ವಹಿಸಿದ್ದ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಶ್ರೀಶೈಲಂ ಚಾಲನೆ ನೀಡಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾರ್ಥಿಗಳಿಗೆ ಬೋಧನೆ ಮೂಲಕವಷ್ಟೇ ವಿದ್ಯೆಯನ್ನು ದಾನ ಮಾಡಲು ಸಾಧ್ಯ ಎಂಬುದಲ್ಲ. ವಿದ್ಯಾರ್ಥಿಗಳಿಗೆ ಕಲಿಯಲು ಬೇಕಾಗುವ ಪಠ್ಯಪುಸ್ತಕ, ನೋಟ್‌ಬುಕ್ ಸೇರಿದಂತೆ ಮತ್ತಿತರ ಸಲಕರಣೆ ಪೂರೈಸುವುದೂ ಶ್ರೇಷ್ಠ ದಾನಗಳಲ್ಲೊಂದಾಗಿದೆ. ಈ ದಿಸೆಯಲ್ಲಿ ಬಡಬಗ್ಗರ ಮಕ್ಕಳೂ ಕಲಿಕೆಯಲ್ಲಿ ಮುಂದುವರೆಯಬೇಕೆಂಬ ಉದ್ದೇಶದಿಂದ ರಜತ ಉಳ್ಳಾಗಡ್ಡಿಮಠ ಕೈಗೊಂಡಿರುವ ಈ ಕಾರ್ಯ ನಿಜಕ್ಕೂ ಅನುಕರಣೀಯ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಶಿಕ್ಷಣ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೂ ಲಭಿಸಬೇಕೆಂಬ ಮಹದಾಸೆ ತಮ್ಮ ತಂದೆ ದಿ. ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಹೊಂದುವ ಮೂಲಕ ಕಾರ್ಯೋನ್ಮುಖರಾಗಿದ್ದರು ಎಂದು ತಂದೆಯವರ ಸಾಮಾಜಿಕ ಕಾರ್ಯ ನೆನೆದು ಆನಂದ ಭಾಷ್ಪ ಸುರಿಸಿದರು.
ತಮ್ಮ ತಂದೆಯವರ ಈ ಕೈಂಕರ್ಯ ಮುಂದುವರೆಸುವುದಲ್ಲದೆ,
ಮುಂಬರುವ ದಿನಗಳಲ್ಲಿ ಈ ಕಾರ್ಯವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕೈಗೊಳ್ಳುವ ಮೂಲಕ ಪ್ರತಿ ವಿದ್ಯಾರ್ಥಿಗೆ ಅನುಕೂಲ ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದರು.
Kshetra Samachara
06/06/2022 10:47 pm