ಧಾರವಾಡ: ಟಿಸಿಯಿಂದ ಆಗಾಗ ಹಾರುತ್ತಿರುವ ಬೆಂಕಿಯ ಕಿಡಿಯಿಂದಾಗಿ ರೈತರೊಬ್ಬರು ಬೆಳೆ ನಷ್ಟ ಅನುಭವಿಸುವಂತಾಗಿದ್ದು, ಹೊಲದಲ್ಲೇ ಇರುವ ಬಾಗಿರುವ ಕಂಬಗಳಿಂದ ಆ ರೈತ ಆತಂಕ ಎದುರಿಸುವಂತಾಗಿದೆ.
ಹೌದು! ನೀವು ದೃಶ್ಯಗಳಲ್ಲಿ ನೋಡುತ್ತಿರುವ ರೈತನ ಹೆಸರು ಕೆಂಚಪ್ಪ ಮಜ್ಜಗಿ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ರೈತ. ಲೋಕೂರು ರಸ್ತೆಯಲ್ಲಿ ಇವರು ಕೃಷಿ ಜಮೀನು ಹೊಂದಿದ್ದು, ಹೊಲದಲ್ಲಿ ಹೆಸ್ಕಾಂನಿಂದ ಟಿಸಿಯೊಂದನ್ನು ಹಾಕಲಾಗಿದೆ. ಅಲ್ಲದೇ ಲೋಕೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಳು ಸಹ ಇವೆ. ಆ ವಿದ್ಯುತ್ ಕಂಬಗಳು ಸಂಪೂರ್ಣ ಬಾಗಿ ನಿಂತಿವೆ. ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ಕಂಬಗಳು ಬಿದ್ದರೆ ಏನು ಗತಿ ಎಂದು ಈ ರೈತ ಆತಂಕ ಎದುರಿಸುತ್ತಿದ್ದಾರೆ.
ಹಳೆಯ ಟಿಸಿಯಿಂದ ಆಗಾಗ ಬೆಂಕಿಯ ಕಿಡಿ ಬಿದ್ದು ಹೊಲದಲ್ಲಿನ ಬೆಳೆ ನಾಶವಾಗುತ್ತಿದೆ. ಮೊನ್ನೆಯಷ್ಟೇ ಬೆಂಕಿಯ ಕಿಡಿ ಬಿದ್ದು, ಕಿತ್ತಿಟ್ಟಿದ್ದ ಗೋದಿಯ ಹುಲ್ಲಿಗೆ ಬೆಂಕಿ ತಾಗಿತ್ತು. ಈ ಟಿಸಿಯನ್ನು ನಡು ಹೊಲ ಬಿಟ್ಟು ಬೇರೆ ಕಡೆ ಸ್ಥಳಾಂತರಿಸಿ ಎಂದು ಹೆಸ್ಕಾಂನವರಿಗೆ ಮನವಿ ಮಾಡಿದರೂ ಯಾರೂ ಕ್ಯಾರೆ ಅಂದಿಲ್ವಂತೆ.
ಹೆಸ್ಕಾಂನವರಿಗೆ ಇವರು ಅನೇಕ ಬಾರಿ ಮನವಿ ಮಾಡಿಕೊಂಡಿದ್ದಾರಂತೆ. ಆದರೆ, ಯಾರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ವಂತೆ. ಟಿಸಿ ನಮ್ಮ ಹೊಲದಲ್ಲೇ ಇರಲಿ ನಾವು ಬೇಡ ಎನ್ನುತ್ತಿಲ್ಲ. ನಡು ಹೊಲ ಬಿಟ್ಟು ಯಾವುದಾದರೊಂದು ಮೂಲೆಯಲ್ಲಿ ಅಳವಡಿಸಿ ಎಂಬುದು ಈ ರೈತನ ಒತ್ತಾಯವಾಗಿದೆ. ಅಲ್ಲದೇ ಹೊಲದಲ್ಲಿ ಸುಮಾರು ನಾಲ್ಕೈದು ಕಂಬಗಳು ಸಂಪೂರ್ಣ ಬಾಗಿ ನಿಂತಿದ್ದು, ಇದರಿಂದ ಅನಾಹುತ ಆಗುವ ಮುಂಚೆಯೇ ಹೆಸ್ಕಾಂ ಎಚ್ಚೆತ್ತುಕೊಳ್ಳಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/04/2022 09:18 am