ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಬಂದಿದ್ದೆ ತಡ ಹು-ಧಾ ಮಹಾನಗರ ಸ್ಮಾರ್ಟ್ ಆಗುತ್ತೇ ಎಂದುಕೊಂಡಿದ್ದ ಜನರಲ್ಲಿ ಆಶಾವಾದಕ್ಕಿಂತ ನಿರಾಶೆಯೆ ಹೆಚ್ಚಾಗಿದ್ದು,ಹುಬ್ಬಳ್ಳಿಯ ನವೀನ್ ಪಾರ್ಕ್ ಸಮಸ್ಯೆಗಳ ಆಗರವೇ ಆಗಿದೆ. ಆದರೆ ಇಲ್ಲಿ ಸಮಸ್ಯೆಗಳು ಸೃಷ್ಟಿಯಾಗಿರೋದಕ್ಕೆ ಇಂಜಿನಿಯರ್‌ಗಳೇ ಪ್ರಮುಖ ಕಾರಣ.
ಇಂಜಿನಿಯರ್‌ಗಳ ಯಡವಟ್ಟಿನಿಂದ ಮಳೆ ನೀರು ಮನೆ ಸೇರುವಂತಾಗಿದೆ. ಸಾಮಾನ್ಯ ಜ್ಞಾನವೂ ಇಲ್ಲದಿರುವ ಇಂಥ ಇಂಜಿನಿಯರ್ ಗಳಿಗೆ ಇಲ್ಲಿನ ನಿವಾಸಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.
ರಸ್ತೆ ನಿರ್ಮಿಸುವುದಕ್ಕೂ ಮುನ್ನ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಬೇಕು ಎಂಬುವುದು ಸಾಮಾನ್ಯ ಜ್ಞಾನ. ಆದರೆ ಇದು ಇಂಜಿನಿಯರ್ ಗಳಿಗೆ ಹೊಳೆದಿಲ್ಲ ಎನ್ನುವುದು ಅಚ್ಚರಿ ಸಂಗತಿಯಾಗಿದೆ.
ರಸ್ತೆಯನ್ನೂ ಎತ್ತರಕ್ಕೆ ನಿರ್ಮಿಸಿ, ರಸ್ತೆಯ ನೀರು ಸೀದಾ ನಿವಾಸಿಗಳ ಮನೆ ಸೇರುವಂತೆ ಮಾಡಿರುವ ಇಂಥ ಇಂಜಿನಿಯರ್‌ಗಳ ಅಜ್ಞಾನಕ್ಕೆ ಏನ್ನೆನ್ನಬೇಕೋ? ಇಷ್ಟು ಸಾಲದು ಎಂಬಂತೆ ಡ್ರೈನೇಜ್ ಗಳ ಮೇಲೆಯೇ ಫೇವರ್ಸ್ ಹಾಕಿ ರಸ್ತೆ ನಿರ್ಮಿಸಿ, ಭವಿಷ್ಯತ್ತಿನಲ್ಲಿ ಒಳಚರಂಡಿ ಸಮಸ್ಯೆ ಉದ್ಭವಿಸಿದರೆ, ಹೊಸ ರಸ್ತೆಯನ್ನೇ ಅಗೆದು ತೆಗೆಯುವಂತ ಘನ ಕಾರ್ಯವನ್ನೂ ಮಾಡಿದ್ದಾರೆ.
ಇಂತಹ ಅವೈಜ್ಞಾನಿಕ ಕಾಮಗಾರಿಯಿಂದ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುತ್ತದೆ ಎಂದು ಸ್ಥಳೀಯರು ಮೊದಲೇ ತಿಳಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಬೆಲೆ ನೀಡದೆ ಅಧಿಕಾರಿಗಳು ಹಾಗೂ ಇಂಜಿನಿಯರ್ ರಾತ್ರೋರಾತ್ರಿ ರಸ್ತೆ ಕಾಮಗಾರಿ ಮುಗಿಸಿದ್ದಾರೆ. ಅಲ್ಲದೇ ಒಳಚರಂಡಿ ತುಂಬಿ ಗಬ್ಬು ವಾಸನೆ ತಾಳಲಾರದೇ ನಿವಾಸಿಗಳೇ ಒಳಚರಂಡಿ ಎಲ್ಲಿದೆ ಎಂದು ಹುಡುಕಿ ಹೊರ ತೆಗೆದು, ಸರಿಪಡಿಸಿದ್ದಾರೆ. ಇಂಥ ಇಂಜಿನಿಯರ್‌ಗಳ ಯಡವಟ್ಟಿನಿಂದಾಗಿ ಸಾರ್ವಜನಿಕರ ಕೋಟ್ಯಂತರ ರೂ. ಹಾಳಾಗುತ್ತಿದೆ.
Kshetra Samachara
04/11/2020 09:50 pm