ಹುಬ್ಬಳ್ಳಿ: ಎತ್ತು ಮತ್ತು ರೈತನ ನಡುವೆ ಒಂದು ರೀತಿಯ ವಿಶೇಷ ಬಾಂಧವ್ಯ ಇರುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ರೈತ ತನ್ನ ಸಹಪಾಠಿಯಾಗಿರುವ ಎತ್ತಿನ ಜನ್ಮದಿನವನ್ನು ಆಚರಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರನಾಗಿದ್ದಾನೆ.
ಹೌದು... ಧಾರವಾಡ ಜಿಲ್ಲೆಯ ಸಂಕ್ಲಿಪೂರ ಗ್ರಾಮದಲ್ಲಿ ಕೃಷಿ ಕಾರ್ಯಕ್ಕೆ ಮಾತ್ರವಲ್ಲದೆ, ಎತ್ತುಗಳ ಮನರಂಜನೆಗಾಗಿ ಏರ್ಪಡಿಸುವ ಗಾಡಾ ಸ್ಪರ್ಧೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ʼಗಾಡಾ ಕಿಂಗ್ ಶ್ರೀನಂದಿʼ ಎತ್ತಿನ ಜನ್ಮದಿನವನ್ನು ಹೂವಿನಶಿಗ್ಲಿ ವಿರಕ್ತಮಠದ ನಿರಂಜನ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕೇಕ್ ಕತ್ತರಿಸುವ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.
ಸಂಕ್ಲಿಪೂರ ಗ್ರಾಮದ ಶಂಕರಗೌಡ್ರ ಕೋಟಿಗೌಡ್ರ ಎಂಬವರ ಶ್ರೀನಂದಿ ಈಗಾಗಲೇ ಧಾರವಾಡ, ಗದಗ, ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಗಾಡಾ ಸ್ಪರ್ಧೆಯಲ್ಲಿ ಚಿನ್ನದ ಬಹುಮಾನ ಗೆದ್ದುಕೊಂಡು, ಗಾಡಾ ಕಿಂಗ್ ಎಂದೇ ಹೆಸರುವಾಸಿ. ರೈತ ಮಿತ್ರನಾಗಿ ಕೃಷಿ ಕಾಯಕದಲ್ಲಿ ಸದಾ ಜೊತೆಗಿರುವ ಎತ್ತಿಗೆ ಈ ರೀತಿಯಾಗಿ ಪ್ರೀತಿಯ ಗೌರವ ಸಮರ್ಪಿಸಲಾಯಿತು. ಇಂತಹ ವಿಶೇಷ ಕಾರ್ಯಕ್ರಮದ ಕುರಿತು ಶ್ರೀಗಳು ಕೂಡ ಖುಷಿ ಪಟ್ಟು, ಅಭಿನಂದನೆ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/06/2022 11:18 am