ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸೋಂಕಿತರ ಮನೆ ಬಾಗಿಲಿಗೆ ಔಷಧ ಕಿಟ್

ಧಾರವಾಡ: ಕೋವಿಡ್-19 ರ ಮೊದಲ ಅಲೆ ಬಂದಾಗ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಾಗುತ್ತಿದ್ದರು. 2ನೇ ಅಲೆ ಬಂದಾಗಲೂ ಆಸ್ಪತ್ರೆಗಳಿಗೆ ಹೆಚ್ಚು ಸೋಂಕಿತರು ದಾಖಲಾದರು. ಈಗ 3ನೇ ಅಲೆ ಬಂದಿದ್ದು, ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಶೇ. 94 ರಿಂದ 95 ರಷ್ಟು ಜನ ಸೋಂಕಿತರು ಹೋಮ್ ಐಸೋಲೇಷನ್ ಆಗುತ್ತಿದ್ದಾರೆ.

ಹೋಮ್ ಐಸೋಲೇಷನ್‍ದಲ್ಲಿರುವ ಸೋಂಕಿತರು ಮಾರ್ಗಸೂಚಿಗಳ ಪಾಲನೆಯೊಂದಿಗೆ ಆರೋಗ್ಯವಂತರಾಗಿ, ರೋಗದಿಂದ ಗುಣಮುಖರಾಗಲು ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಹೊಸ ಉಪಾಯ ಹುಡುಕಿ, ಅನುಷ್ಠಾನಗೊಳಿಸಿವೆ. ಅದುವೇ “ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್” ವಿತರಣೆ.

ಕಳೆದ ಮೂರ್ನಾಲ್ಕು ದಿನಗಳಿಂದ ಇದು ಉತ್ತಮ ರೀತಿಯಿಂದ ಅನುಷ್ಠಾನವಾಗುತ್ತಿದೆ.

ಕೋವಿಡ್ ಸೋಂಕಿತ ವ್ಯಕ್ತಿ ಸಾರ್ವಜನಿಕವಾಗಿ ಸಂಚರಿಸುವುದರಿಂದ ರೋಗ ಇತರರಿಗೂ ಬೇಗ ಹರಡುತ್ತದೆ. ಕೆಮ್ಮು, ನೆಗಡಿ, ಜ್ವರ ಇವುಗಳಿಂದ ಪರಸ್ಪರರಿಗೆ ಬೇಗ ತಗಲುವ ಸಾಧ್ಯತೆ ಇರುತ್ತದೆ. ಸೋಂಕಿತ ವ್ಯಕ್ತಿಯು ಸಾರ್ವಜನಿಕವಾಗಿ, ಅನಗತ್ಯವಾಗಿ ಸಂಚರಿಸುವುದನ್ನು ನಿಯಂತ್ರಿಸಲು, ಚಿಕಿತ್ಸೆ, ಔಷಧಿ ಹಾಗೂ ಆಸ್ಪತ್ರೆಗಳಿಗೆ ಅಲೆಯದಂತೆ ಮಾಡಲು ಔಷಧಿ ಕಿಟ್‍ಗಳನ್ನು ಸೋಂಕಿತರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಮತ್ತು ಸೋಂಕಿತನ ಕುಟುಂಬವನ್ನು ಜಾಗೃತಗೊಳಿಸಲಾಗುತ್ತದೆ.

ಮಹಾನಗರ ಪಾಲಿಕೆಯಲ್ಲಿ ಕೋವಿಡ್ ಸೋಂಕಿತರಿಗೆ ಔಷಧಿ ವಿತರಣೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ದಿನದ 24 ಗಂಟೆಯೂ ಮೂರು ಶಿಫ್ಟ್ ಮೇಲೆ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಾನಗರದ ಯಾವುದೇ ಭಾಗದಿಂದ ಕೋವಿಡ್ ಸೋಂಕಿತರು ಔಷಧಿ ಕಿಟ್ ಕೇಳಿ ಕರೆ ಮಾಡಿದರೆ, ತಕ್ಷಣ ಸಂಬಂಧಿತ ವಲಯ ಕಚೇರಿ ಮೂಲಕ ಆಯಾ ವಾರ್ಡ್‍ನಲ್ಲಿರುವ ಸೋಂಕಿತರ ಮನೆ ಬಾಗಿಲಿಗೆ ಔಷಧಿ ತಲುಪಿಸಲಾಗುತ್ತಿದೆ ಮತ್ತು ಸೋಂಕು ದೃಢಪಟ್ಟ ಪ್ರತಿಯೊಬ್ಬರ ಮನೆಗೂ ಔಷಧಿ ಕಿಟ್ ತಲುಪಿಸಲಾಗುತ್ತದೆ. ರಾತ್ರಿಯೂ ಸಹ ಈ ಸೇವೆ ಲಭ್ಯವಿದೆ.

ಗ್ರಾಮೀಣ ಪ್ರದೇಶದಲ್ಲೂ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕಾ ಆಸ್ಪತ್ರೆಗಳಿಂದ ಔಷಧಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಔಷಧಿ ಕಿಟ್ ವಿತರಣೆಗಾಗಿ ಸುಮಾರು 30 ಕ್ಕೂ ಹೆಚ್ಚು ವಾಹನಗಳನ್ನು ಸಿದ್ಧಗೊಳಿಸಲಾಗಿದೆ. ಪಾಲಿಕೆಯ ಪ್ರತಿ ವಲಯಕ್ಕೆ 2 ರಿಂದ 3 ವಾಹನ ನೀಡಲಾಗಿದೆ. ಪ್ರತಿ ತಂಡದಲ್ಲಿ ಹೆಲ್ತ್ ಇನ್‌ ಸ್ಪೆಕ್ಟರ್, ಬಿಲ್ ಕಲೆಕ್ಟರ್ ಮತ್ತು ಅಗತ್ಯವಿದ್ದಲ್ಲಿ ಆರೋಗ್ಯ ಸಿಬ್ಬಂದಿ ಇರುತ್ತಾರೆ.

ಸೋಂಕು ದೃಢಪಟ್ಟ ವ್ಯಕ್ತಿಗೆ ಮತ್ತು ಕರೆ ಮಾಡಿದ ಸೋಂಕಿತರ ಮನೆಗೆ ತಂಡವು ಭೇಟಿ ನೀಡಿ, ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಕಿಟ್ ನೀಡಿ, ಸೋಂಕಿತನ ಆರೋಗ್ಯ ವಿಚಾರಿಸುತ್ತದೆ. ಹೋಮ್ ಐಸೋಲೇಷನ್ ಮಾರ್ಗಸೂಚಿಗಳನ್ನು ವಿವರಿಸಿ, ಸೋಂಕಿತರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಅವರನ್ನು ಎಜ್ಯುಕೇಟ್ ಮಾಡುತ್ತದೆ. ಆಪ್ತ ಸಮಾಲೋಚನೆ ಮೂಲಕ ಧೈರ್ಯ, ಆತ್ಮವಿಶ್ವಾಸ ಮೂಡಿಸುತ್ತದೆ.

ಸೋಂಕಿತ ಮಕ್ಕಳಿಗಾಗಿ ವಿಶೇಷ ತಂಡ : ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸುತ್ತಿದ್ದು, ಜಿಲ್ಲೆಯ ಹಲವಾರು ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಮತ್ತು ಸೋಂಕಿತ ಮಕ್ಕಳಿಗೆ ಅಗತ್ಯ ಚಿಕಿತ್ಸೆ, ಔಷಧಿ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಲಾಗಿದೆ. ಕೋವಿಡ್ ಸೋಂಕು ದೃಢಪಟ್ಟ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಲು ಈಗ ಮಕ್ಕಳ ವೈದ್ಯರಿರುವ ಏಳು ವಿಶೇಷ ತಂಡಗಳನ್ನು ರಚಿಸಲಾಗಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ನೇಮಕಗೊಂಡಿರುವ ವೈದ್ಯರು ಈ ವಿಶೇಷ ತಂಡದಲ್ಲಿದ್ದು, ಅವರು ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಿ, ನಿಯಮಿತ ಆಹಾರ, ಔಷಧಿ ಪ್ರಮಾಣ, ವ್ಯಾಯಾಮ ಕುರಿತು ತಿಳುವಳಿಕೆ ನೀಡುತ್ತಾರೆ. ಇಂತಹ ಮಕ್ಕಳ ಬಗ್ಗೆ ಜಾಗೃತಿ ವಹಿಸುವ ಮತ್ತು ಕಾಲಕಾಲಕ್ಕೆ ಮುಂಜಾಗೃತೆ ವಹಿಸುವ ವಿಷಯಗಳ ಕುರಿತು ಪಾಲಕರಿಗೂ ಸಹ ಎಜ್ಯುಕೇಟ್ ಮಾಡುತ್ತಾರೆ.

ಔಷಧಿ ಕಿಟ್‍ಗಳನ್ನು ಸೋಂಕಿತರಿಗೆ ಹಾಗೂ ಕೋವಿಡ್ ಪರೀಕ್ಷೆ ಬಂದಿರುವ, ಲಕ್ಷಣಗಳಿರುವ ವ್ಯಕ್ತಿಗೂ ಸಹ ನೀಡಲಾಗುತ್ತಿದೆ. ಮಹಾನಗರ ಸೇರಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುಮಾರು 7730 ಔಷಧಿ ಕಿಟ್‍ಗಳನ್ನು ವಿತರಿಸಲಾಗಿದ್ದು, ಇದರಲ್ಲಿ ಧಾರವಾಡ ತಾಲೂಕು 910, ಕುಂದಗೋಳ ತಾಲೂಕು 700, ಕಲಘಟಗಿ ತಾಲೂಕು 100, ನವಲಗುಂದ ತಾಲೂಕು 650, ಚಿಟಗುಪ್ಪಿ ಆಸ್ಪತ್ರೆ 100 ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 4970 ಔಷಧಿ ಕಿಟ್‍ಗಳನ್ನು ವಿತರಿಸಲಾಗಿದೆ. ನಿನ್ನೆ (ಜ.20) ದಿನ 1600 ಮತ್ತು ಇಂದು (ಜ.21) 3150 ಔಷಧಿ ಕಿಟ್‍ಗಳನ್ನು ಪಾಲಿಕೆ ವ್ಯಾಪ್ತಿಯ ಸೋಂಕಿತರ ಮನೆ ಬಾಗಿಲಿಗೆ ತಲುಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೋವಿಡ್ 3ನೇ ಅಲೆ ಸೋಂಕು ಹೆಚ್ಚಳವಾಗುವ ಕುರಿತು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಹೋಮ್ ಐಸೋಲೇಷನ್ ಆಗುವವರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅತ್ಯಂತ ವಿರಳವಾಗಿದೆ.

ಜಿಲ್ಲಾಡಳಿತ ಹೋಮ್ ಐಸೋಲೇಷನ್ ಆಗುವವರಿಗೆ ಔಷಧಿ ಕಿಟ್ ತಲುಪಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅಗತ್ಯವಾಗಬಹುದಾದ ಔಷಧಿಗಳ ದಾಸ್ತಾನು ಸಹ ಹೊಂದಿದ್ದು, ಎಲ್ಲಾ ಪಿಎಚ್‍ಸಿ ತಾಲೂಕಾ ಅಸ್ಪತ್ರೆಗಳಿಗೆ ಮತ್ತು ಜಿಲ್ಲಾ ಆಸ್ಪತ್ರೆಗೆ ಈಗಾಗಲೇ ಔಷಧಿಗಳನ್ನು ವಿತರಿಸಿ ಸ್ಟಾಕ್ ಹೊಂದಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು, ಸೋಂಕಿತರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯಲ್ಲಿ ತೆರೆಯಲಾದ ಸಹಾಯವಾಣಿ ಸಂಖ್ಯೆ : 0836-2213803 ಹಾಗೂ 08362213806 ಮತ್ತು ಮೊಬೈಲ್ ಸಂಖ್ಯೆ: 9141051611 ಗೆ ಕರೆ ಮಾಡಿ ಔಷಧಿ ಕಿಟ್ ಅಗತ್ಯವಿರುವ ಕುರಿತು ತಿಳಿಸಬಹುದು. ದಿನದ 24 ಗಂಟೆ ಇದು ಕಾರ್ಯನಿರ್ವಹಿಸುತ್ತದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

21/01/2022 08:10 pm

Cinque Terre

24.09 K

Cinque Terre

5

ಸಂಬಂಧಿತ ಸುದ್ದಿ