ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗೋ ಕೊರೊನಾ ಗೋ.. ಅರೆರೆ ಇದೇನಿದು?

ಧಾರವಾಡ: ಸಾಮಾನ್ಯವಾಗಿ ದೇವರ ಜಾತ್ರೆಗಳು, ಉತ್ಸವ ಹಾಗೂ ವಿಶೇಷ ಪೂಜೆಗಳೇನಾದ್ರೂ ನಡೆದರೆ ಅಲ್ಲಿಗೆ ಬರುವ ಭಕ್ತರು ತಮ್ಮ ವೈಯಕ್ತಿಕ ಬೇಡಿಕೆಗಳನ್ನೇ ದೇವರ ಮುಂದೆ ಇಡುವುದು ಸಾಮಾನ್ಯ. ಆದರೆ ಇಡೀ ಸಮಾಜವೆಲ್ಲ ಒಂದೇ ಬೇಡಿಕೆ ಇಟ್ಟುಕೊಂಡು, ಸಮಾಜಕ್ಕಾಗಿಯೇ ದೇವರ ಉತ್ಸವ ಮಾಡುವದು ಕಡಿಮೆ.

ಆದ್ರೆ ಅಂತಹ ಒಂದು ಉತ್ಸವ ಧಾರವಾಡದಲ್ಲಿ ನಡೆದಿದೆ. ಅದು ಕೂಡ ಯಾವ ಬೇಡಿಕೆ ಗೊತ್ತಾ? ಗೋ ಕೊರೊನಾ.. ಗೋ... ಅರೆರೆ ಇದೇನಿದು ಅಂತೀರಾ? ಈ ಸ್ಟೋರಿ ನೋಡಿ ನಿಮಗೇ ಗೊತ್ತಾಗುತ್ತೆ.

ಹೀಗೆ ದೇವಸ್ಥಾನದ ಮುಂದೆ ನಿಂತು ಕಬ್ಬಿಣದ ಸರಪಳಿ ಹರಿಯುತ್ತಿರುವ ಜನ ಒಂದು ಕಡೆ... ದೇವರ ಪಲ್ಲಕ್ಕಿ ಉತ್ಸವ ಮಗದೊಂದು ಕಡೆ... ಇದೆಲ್ಲವೂ ನಡೆದಿದ್ದು, ವಿದ್ಯಾಕಾಶಿ ಧಾರವಾಡದಲ್ಲಿ.

ಹೌದು, ಧಾರವಾಡದ ರಾಜೀವ ಗಾಂಧಿ ನಗರದಲ್ಲಿರುವ ಭಂಡಾರದೊಡೆಯ ಮೈಲಾರಲಿಂಗೇಶ್ವರ ಮತ್ತು ಆದಿಶಕ್ತಿ ಎಣ್ಣೆ ಹೊಳೆಮ್ಮದೇವಿ ದೇವಸ್ಥಾನದಲ್ಲಿ ನಡೆದ ವಿಶಿಷ್ಟ ಜಾತ್ರೆಯ ಝಲಕ್ ಇದು.

ಅಷ್ಟಕ್ಕೂ ಈ ರೀತಿ ಕೆಲ ಭಕ್ತರು ತಮ್ಮ ದೇಹಕ್ಕೆ ತಾವೇ ದಂಡನೆ ಕೊಟ್ಟುಕೊಂಡು ಭಕ್ತಿ ಸಮರ್ಪಿಸುತ್ತಿರುವುದಾದರೂ ಏತಕ್ಕೆ ಗೊತ್ತಾ? ನಮ್ಮ ಸಮಾಜದಿಂದ ಕೊರೊನಾ ದೂರ ಹೋಗಬೇಕು. ಕೊರೊನಾದಿಂದ ವಿದ್ಯಾಭ್ಯಾಸ ನಿಂತು ಹೋಗಿ ಮಂಕು ಕವಿದಿರುವ ಮಕ್ಕಳಿಗೆ ವಿದ್ಯಾದೇವತೆ ಒಲಿಯಬೇಕು.

ರೈತರಿಗೆ ಒಳ್ಳೆದಾಗಬೇಕು ಹಾಗೂ ಲಾಕ್ ಡೌನ್ ನಿಂದ ನಿಂತು ಹೋಗಿರುವ ವ್ಯಾಪಾರ, ಆರ್ಥಿಕ ಚಟುವಟಿಕೆಗಳೆಲ್ಲ ಮೊದಲಿನಂತೆ ಆಗಬೇಕು ಎನ್ನುವುದೇ ಪ್ರಮುಖವಾಗಿತ್ತು.

ಈ ರೀತಿ ಸಮಾಜಕ್ಕಾಗಿಯೇ ಇಂತಹ ಪೂಜೆ, ಉತ್ಸವ ಮಾಡುತ್ತ ಇರೋದು ಇದೇ ಮೊದಲ ಸಲವೇನೂ ಅಲ್ಲ. ಈ ಹಿಂದೆ ಕೊಡಗು ಭಾಗದಲ್ಲಿ ಭೂ ಕುಸಿತವಾಗುತ್ತಿದ್ದಾಗ, ಅದು ನಿವಾರಣೆಯಾಗುವಂತೆ ಇವರು ಪ್ರಾರ್ಥಿಸಿದ್ದರು.

ಕಳೆದ ವರ್ಷ ಪ್ರವಾಹ ಬಂದಾಗ ದೀರ್ಘ ದಂಡ ನಮಸ್ಕಾರದ ಕಠಿಣ ವ್ರತ ಮಾಡಿದ್ದರು. ಅಷ್ಟೇ ಏಕೆ ಈಗಷ್ಟೇ ಕಳೆದ ಕೆಲ ದಿನಗಳ ಹಿಂದ ಕಿಲೋ ಮೀಟರ್ ಗಟ್ಟಲೇ ಇದೇ ಸ್ವಾಮೀಜಿ ಕೊರೊನಾ ನಿವಾರಣೆಗಾಗಿ ಉರುಳು ಸೇವೆಯ ಭಕ್ತಿ ಸಮರ್ಪಿಸಿದ್ದರು. ಇಲ್ಲಿ ಇಡುವ ಬೇಡಿಕೆಗಳನ್ನು ಭಂಡಾರದೊಡೆಯ ಮೈಲಾರಲಿಂಗೇಶ್ವರ ಮತ್ತು ಆದಿಶಕ್ತಿ ಎಣ್ಣೆ ಹೊಳೆಮ್ಮದೇವಿ ಈಡೇರಸ್ತಾರೆ ಅಂತಾರೆ ಭಕ್ತರು.

ಸದ್ಯ ಕೊರೊನಾ ನಿವಾರಣೆಗಾಗಿ ನಮ್ಮ ದೇಶ ಮಾತ್ರವಲ್ಲ ಇಡೀ ಜಗತ್ತಿನ ವಿಜ್ಞಾನ ಲೋಕವೇ ಲಸಿಕೆ ಕಂಡು ಹಿಡಿಯಲು ಹರಸಾಹಸ ಮಾಡುತ್ತಿರುವಾಗ, ಈ ರೀತಿ ದೇವರ ಮುಂದೆ ಕೊರೊನಾ ಹೋಗಲಿ ಅಂತಾ ಉತ್ಸವ ಮಾಡಿದ್ದು, ವಿಚಿತ್ರ ಅನಿಸುವುದಾದರೂ, ಇಂತಹ ಉತ್ಸವಗಳ ಮೂಲಕ ಕೊರೊನಾದಿಂದ ಕಂಗೆಟ್ಟು ಹೋಗಿರುವ ಜನರ ಮನಸ್ಸಿನಲ್ಲಿ ತುಸು ಆತ್ಮಸ್ಥೈರ್ಯವಾದ್ರೂ ಬಂದೇ ಬರುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Edited By : Manjunath H D
Kshetra Samachara

Kshetra Samachara

30/11/2020 12:57 pm

Cinque Terre

33.88 K

Cinque Terre

0

ಸಂಬಂಧಿತ ಸುದ್ದಿ