ಧಾರವಾಡ: ಜಲಮಂಡಳಿಯ ನಿರ್ವಹಣೆ ಕೆಲಸವನ್ನು ಸರ್ಕಾರ ಇದೀಗ ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಿದ್ದು, ಮಹಾನಗರ ಪಾಲಿಕೆ ಜಲಮಂಡಳಿ ಸಿಬ್ಬಂದಿಗೆ ತಾತ್ಕಾಲಿಕ ಉದ್ಯೋಗದ ಭರವಸೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆಗ್ರಹಿಸಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ ಆ್ಯಂಡ್ ಟಿ ಕಂಪೆನಿ ದೊಡ್ಡ ಕಂಪೆನಿ. ಆದರೆ ಅದರ ಹೆಸರು ಮಾತ್ರ ದೊಡ್ಡದು. ಕೆಲಸ ಮಾತ್ರ ಶೂನ್ಯ. ಖಾಸಗೀಕರಣದ ಮೂಲಕ ಕಾರ್ಮಿಕರ ಮೇಲೆ ಷಡ್ಯಂತ್ರ ಮಾಡಲಾಗುತ್ತಿದೆ. ಈ ಕಂಪನಿ ಗುತ್ತಿಗೆ ಮುಗಿದ ನಂತರವೂ ನಾವು ಉದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ನೀಡುತ್ತೇವೆ ಎಂಬ ಭರವಸೆಯನ್ನು ಮಹಾನಗರ ಪಾಲಿಕೆ ನೀಡಬೇಕು ಎಂದರು.
ಸದ್ಯ 900 ಕೋಟಿ ರೂಪಾಯಿಯಲ್ಲಿ ಜಲಮಂಡಳಿ ನಿರ್ವಹಣೆ ಸಂಬಂಧ ಟೆಂಡರ್ ಆಗಿದೆ. ಈ ಕಂಪನಿ ಬಂದಾಗಿನಿಂದ ಮೂರು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ಕುಡಿಯುವ ನೀರು ಇದೀಗ ಏಳು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಈ ನಿರ್ವಹಣೆ ಮೊದಲಿನಂತೆ ಇರಬೇಕು. ಕಂಪನಿಗೆ ಇವರು ಯಾವ ರೀತಿಯ ಭದ್ರತೆ ನೀಡುತ್ತಾರೋ ಅದೇ ರೀತಿ ಕಾರ್ಮಿಕರಿಗೂ ಭದ್ರತೆ ನೀಡಬೇಕು. ಸದ್ಯ 600 ಜನ ಉದ್ಯೋಗಿಗಳ ಕುಟುಂಬ ಬೀದಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಖಾಸಗಿ ಕಂಪನಿಗೆ ಟೆಂಡರ್ ಕೊಟ್ಟಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಇನ್ನೂ 225 ಕೋಟಿ ರೂಪಾಯಿ ಕರ ವಸೂಲಿ ಮಾಡುವುದು ಬಾಕಿ ಇದೆ. ಇದನ್ನು ಸರ್ಕಾರ ಮನ್ನಾ ಮಾಡಬೇಕು. ಶೇ.40 ರಷ್ಟು ಕಮೀಷನ್ ಕೊಡುವವರ ಜೊತೆ ಸರ್ಕಾರ ಕೂಡಲೇ ಸಭೆ ನಡೆಸುತ್ತದೆ. ಆದರೆ, ಕಾರ್ಮಿಕರ ಜೊತೆ ಸಭೆ ನಡೆಸುವುದಿಲ್ಲ ಏಕೆಂದರೆ ಅವರ ಬಳಿ ಕಮೀಷನ್ ಕೊಡಲು ಹಣವಿಲ್ಲ. ಚುನಾಯಿತ ಪ್ರತಿನಿಧಿಗಳು ಪಾಲಿಕೆಯಲ್ಲಿ ಇಲ್ಲದೇ ಇರುವುದರಿಂದ ಈ ರೀತಿಯ ಸಮಸ್ಯೆ ಆಗುತ್ತಿದೆ. ಜಲಮಂಡಳಿಯ ಸಿಬ್ಬಂದಿಗೆ ನಾವು ಸರಿಯಾದ ಮಾರ್ಗ ತೋರಿಸುತ್ತೇವೆ. ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುವುದಿಲ್ಲ ಎಂದರು.
ಮೇಯರ್, ಉಪಮೇಯರ್ ಚುನಾವಣೆ ನಡೆಸುವಂತೆ ಶೀಘ್ರವೇ ನಾವು ದೊಡ್ಡಮಟ್ಟದಲ್ಲಿ ಪಾದಯಾತ್ರೆ ಕೂಡ ನಡೆಸಲಿದ್ದೇವೆ ಎಂದರು.
Kshetra Samachara
28/04/2022 05:32 pm