ಕುಂದಗೋಳ: ತಾಲೂಕಿನ ಯಲಿವಾಳದಲ್ಲಿ ತಹಶೀಲ್ದಾರ್ ಕೈಗೊಂಡ ಗ್ರಾಮ ವಾಸ್ತವ್ಯದಲ್ಲೇ ಜನ "ತಹಶೀಲ್ದಾರರೇ, ನಮ್ಮ ಮಾತಿಗೆ ಲಕ್ಷ್ಯ ಕೊಡ್ರೀ" ಎಂದು ಆಗಾಗ ಕೆಟ್ಟು ಹೋಗುವ ಮೈಕ್'ನಲ್ಲೇ ಪ್ರಶ್ನೆ ಕೇಳಿದ್ರೆ, ಜನರ ಎಲ್ಲಾ ಪ್ರಶ್ನೆಗೆ 'ಮನವಿ ಕೊಡಿ' ಎಂಬ ಸರ್ವೇ ಸಾಮಾನ್ಯ ಉತ್ತರ ಸಿಕ್ಕಿದೆ.
ಯಲಿವಾಳದ ಜನ ಜಲ ಜೀವನ್ ಮಷಿನ್ ಬದಲಾಗಿ ಮಲಪ್ರಭಾ ನೀರಿಗೆ ಬೇಡಿಕೆ ಇಟ್ಟು ಜಲ ಜೀವನ್ ಮಷಿನ್ ಬೇಡ ಎಂದಿದ್ದಾರೆ. ಇದಲ್ಲದೆ, ಗ್ರಾಮದಲ್ಲಿ ಹೆಚ್ಚಾದ ಅಕ್ರಮ ಸಾರಾಯಿ ಮಾರಾಟ, ಓಸಿ, ಹಂದಿಗಳ ಕಾಟಕ್ಕೆ ಪರಿಹಾರದ ಜೊತೆಗೆ ನರೇಗಾ ಕೂಲಿಕಾರರ ಹಣ ಶೀಘ್ರ ನೀಡುವಂತೆ ಒತ್ತಾಯಿಸಿದ್ದಾರೆ.
ಇಂದಿಗೂ ಯಲಿವಾಳದಲ್ಲಿ 130 ನಾಡಗೀರ ಹೆಸರಲ್ಲೇ ಇದ್ದು, ಈ ಸ್ವತ್ತು ಸಿಕ್ಕಿಲ್ಲಾ ಎಂಬ ಮಾತು ಗ್ರಾಪಂ ಆಡಳಿತ ವೈಖರಿ ಬಿಂಬಿಸಿತು. ಸರ್ಕಾರಿ ಶಾಲೆಗೆ ಶೌಚಾಲಯ, ನೀರಿನ ಸೌಲಭ್ಯ ಇತರ ಮೂಲ ಸೌಕರ್ಯ ಒದಗಿಸುವ ಮಾತು ಕೇಳಿ ಬಂದಿತು.
ಎಲ್ಲದಕ್ಕಿಂತ ಮುಖ್ಯವಾಗಿ ರೈತರು ಶೇಂಗಾ ಬೀಜ ವಿತರಣೆ ಸಬ್ಸಿಡಿ, ತೋಟಗಾರಿಕೆ ಇಲಾಖೆ ಯಂತ್ರೋಪಕರಣ ಮಾಹಿತಿ , ಅಕ್ರಮ ಸಾರಾಯಿ ಮಾರಾಟ ಹತ್ತಿಕ್ಕಲು ಏನು ಮಾಡಿದ್ದೀರಿ ಎಂದಾಗ ಸ್ವತಃ ಅಧಿಕಾರಿಗಳೇ ಉತ್ತರ ಕೊಡಲು ತಡಬಡಾಯಿಸಿದರು.
ಒಟ್ಟಾರೆ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಕೇವಲ ಸಮಸ್ಯೆ ಕೇಳಲು ಮಾತ್ರ ಸೀಮಿತವಾಗಿದ್ದು, ಪರಿಹಾರ ಮಾತ್ರ ಶೂನ್ಯ ಎಂದು ಜನರ ಗೊಣಗಾಟ ಕೇಳಿ ಬಂದವು.
Kshetra Samachara
19/06/2022 10:36 am