ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಕಾರದ ಆದೇಶದಿಂದ ಹೆಗಲ ಮೇಲೆ ಕಳಚಿ ಬಿತ್ತು ಮುಗಿಲು: ಇದು ಪಿಎಸ್ಐ ಅಭ್ಯರ್ಥಿಗಳ ಕಣ್ಣೀರ ಕಹಾನಿ

ಹುಬ್ಬಳ್ಳಿ: ಅವರೆಲ್ಲರೂ ಐದಾರು ವರ್ಷಗಳ ಕಾಲ ಮನೆಯಿಂದ ದೂರ ಉಳಿದು ಶ್ರಮಪಟ್ಟವರು. ಹಬ್ಬ ಹುಣ್ಣಿಮೆ ಎಂಬುವುದನ್ನು ನೋಡದೇ ಪುಸ್ತಕದ ಹುಳುಗಳಂತೆ ಓದಿಕೊಂಡಿದ್ದವರು. ಈಗ ಸರ್ಕಾರದ ಒಂದು ನಿರ್ಧಾರ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗಿದ್ದು, ಇಷ್ಟು ವರ್ಷಗಳ ಶ್ರಮವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅಷ್ಟಕ್ಕೂ ಅವರು ಯಾರು...? ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...

ಹೀಗೆ ಸಪ್ಪೆ ಮುಖವನ್ನು ಹಾಕಿಕೊಂಡು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಇವರು ಪಿಎಸ್ಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ತವ್ಯಕ್ಕೆ ಹಾಜರಾಗಲು ದಿನಗಣನೆ ಮಾಡುತ್ತಿದ್ದಾರೆ. ಆದರೆ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವ್ಯವಹಾರ ನಡೆದಿದ್ದು, ತನಿಖೆ ಪೂರ್ಣಗೊಳ್ಳುವ ಮುನ್ನವೇ ಸರ್ಕಾರ ಮರು ಪರೀಕ್ಷೆಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಪಿ ಎಸ್ ಐ ಪರೀಕ್ಷೆ ಬರೆದು ನೇಮಕಾತಿ ಹೊಂದಿದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಿಐಡಿ ತನಿಖೆ ಎದುರಿಸಿದರೂ ರದ್ದು ಮಾಡಿದ್ದು ಖಂಡನೀಯ, ನಮಗೆ ಯಾವುದೇ ದಾರಿ ಇಲ್ಲ, ನಾವು ವಿಷ ಕುಡಿಯಬೇಕು ಅಷ್ಟೇ ಎಂದು ಅಭ್ಯರ್ಥಿಗಳು ಕಣ್ಣೀರು ಹಾಕಿದ್ದಾರೆ.

ಇನ್ನೂ ನೇಮಕಾತಿಗೊಂಡ ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡಿದ್ದು, ಸರ್ಕಾರ ಸಿಐಡಿ ತನಿಖೆ ಎದುರಿಸಿ ಅಂತ ಹೇಳಿತ್ತು. ಅದರಲ್ಲಿ ನಮ್ಮ ಎಲ್ಲ ಒರಿಜಿನಲ್ ದಾಖಲಾತಿಗಳನ್ನ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇನ್ನೇನು ಎಲ್ಲವೂ ಮುಗಿದಿದೆ ಅನ್ನೋವಷ್ಟರಲ್ಲಿ ಹೀಗೆ ಆಗಿದೆ. ಯಾರೋ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ಯಾಕೆ. ಎಲ್ಲವೂ ತನಿಖೆ ಆಗಿದೆ, ಆದರೆ ತಪ್ಪಿತಸ್ಥರನ್ನು ಬಿಟ್ಟು ನಮಗೆ ಈ ಶಿಕ್ಷೆ ನೀಡಿದ್ದು ಎಷ್ಟು ಸರಿ ಎಂದು ಸರ್ಕಾರದ ವಿರುದ್ಧ ಪಿಎಸ್‌ಐ ನೇಮಕಗೊಂಡವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸರ್ಕಾರದ ಮರು ಪರೀಕ್ಷೆ ಆದೇಶವನ್ನು ಧಿಕ್ಕರಿಸಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಡ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ಈ ಒಂದು ನಿರ್ಧಾರ ನೂರಾರು ಬಡ ಕುಟುಂಬದ ಆಶಾಭಾವನೆಯನ್ನು ಕಿತ್ತುಕೊಂಡಿದ್ದು, ಇನ್ನಾದರೂ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ‌ ಮೂಲಕ ಪ್ರಾಮಾಣಿಕರ ಪರಿಶ್ರಮಕ್ಕೆ ಸರ್ಕಾರ ಬೆಲೆ ನೀಡುವ ಕಾರ್ಯ ಆಗಬೇಕಿದೆ.

Edited By :
Kshetra Samachara

Kshetra Samachara

29/04/2022 06:47 pm

Cinque Terre

25.66 K

Cinque Terre

2

ಸಂಬಂಧಿತ ಸುದ್ದಿ