ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಸಾಕಷ್ಟು ನಗರೀಕರಣ ಹೊಂದಿದ್ದರೂ ಕೂಡ ಸಾಂಪ್ರದಾಯಿಕ ಆಚರಣೆಗಳನ್ನು ಮಾತ್ರ ಎಂದಿಗೂ ಕೈ ಬಿಟ್ಟಿಲ್ಲ. ಜೀವನ ಶೈಲಿ ಸ್ಮಾರ್ಟ್ ಸಿಟಿ ಆಗಿದ್ದರೂ ಎಲ್ಲ ಆಚರಣೆಗೆ ಒತ್ತು ನೀಡುವ ಮೂಲಕ ಭಾರತೀಯ ಗತವೈಭವವನ್ನು ಎತ್ತಿ ಹಿಡಿದಿದೆ.
ಹೌದು.. ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯಿಕ ಹಬ್ಬ ಮಣ್ಣೆತ್ತಿನ ಅಮವಾಸ್ಯೆ. ಇದು ಮುಂಗಾರಿನ ಆರಂಭದ ಹಬ್ಬ ಕೂಡ. ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ರೈತರು ಪೂಜಿಸಿ ಸಂಭ್ರಮಪಡುವ ಈ ಹಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ.
ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ಸಣ್ಣ ದೊಡ್ಡ ಆಕಾರಗಳಲ್ಲಿ ಕೆಲವರು ಮನೆಯಲ್ಲಿಯೇ ತಯಾರಿಸಿ ಕೊಳ್ಳುತ್ತಾರೆ. ಇಲ್ಲವೇ ಊರ ಕುಂಬಾರ ಮನೆಗಳಿಂದಲೂ ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತು , ಹುಲ್ಲು ತಿನ್ನಲು ಗ್ವಾದಲಿ ತರುತ್ತಾರೆ. ರೈತನ ಬಲದ ನೆಲೆಯಿಂದ ಎತ್ತುಗಳನ್ನು ಗಣಪನಂತೆ ಮಣ್ಣಿನಿಂದ ಮಾಡಿ ಪೂಜಿಸಿ ಎತ್ತುಗಳಿಗೆ ದೈವಿ ಸ್ವರೂಪ ಕೊಡುವುದು ನಮ್ಮ ಸಂಪ್ರದಾಯ. ಅದರಂತೆ ದೇವರ ಜಗುಲಿಯ ಮೇಲಿಟ್ಟು ಪೂಜೆ ಮಾಡುತ್ತಾರೆ. ಇಂತಹ ವಿಶಿಷ್ಟ ಆಚರಣೆಗೆ ಹುಬ್ಬಳ್ಳಿಯ ಬೆಂಗೇರಿ ಸಾಕ್ಷಿಯಾಗಿದೆ.
ಇನ್ನೂ ಬೆಂಗೇರಿಯ ಕಲ್ಲಪ್ಪ ಹೊಸಮನಿ ರೈತ ಕುಟುಂಬದಲ್ಲಿಂದು ವಿಶೇಷವಾಗಿ ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಮಾಡಲಾಯಿತು. ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತು ಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ, ಮಣ್ಣು ಒಕ್ಕಲು ಮಕ್ಕಳಿಗೆ ಅತ್ಯಂತ ಪವಿತ್ರವಾದುದು. ವರ್ಷಾರಂಭದಿಂದ ಐದು ಮುಖ್ಯ ಮಣ್ಣಿನ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ.
ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣು ಪೂಜೆಯ ದ್ಯೋತಕವಾಗಿವೆ, ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಹಾಗೂ ಜೋಕುಮಾರ ಈ ಐದೂ ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ.
ಒಟ್ಟಿನಲ್ಲಿ ಮಣ್ಣೆತ್ತುಗಳಿಗೆ ಹೂವಿನಿಂದ ಪೂಜಿಸಿ ಕಾಯಿ ಕರ್ಪೂರ, ಲೋಭಾನ ಆರತಿ ಮಾಡಿ ವಿವಿಧ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಇಂತಹ ಆಚರಣೆಗಳು ಮತ್ತಷ್ಟು ಮೆರಗನ್ನು ಪಡೆದುಕೊಂಡು ಮುಂದಿನ ಪೀಳಿಗೆಗೆ ಇದರ ಪರಿಚಯವಾಗಬೇಕಿದೆ.
Kshetra Samachara
28/06/2022 03:33 pm