ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಧಾರವಾಡದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ೧೯೧ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ, ಶೌರ್ಯ ಪ್ರಶಸ್ತಿ ವಿತರಣೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನಾಳೆ (ಜ.೨೬)ರ ಸಂಜೆ ೫ ಗಂಟೆಗೆ ನಗರದ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಎಫ್ ಮುದಕಣ್ಣವರು ತಿಳಿಸಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ನಾಳಿನ ಕಾರ್ಯಕ್ರಮದ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯವನ್ನು ಧಾರವಾಡ ಮನಸೂರು ಮಠದ ಶ್ರೀ ರೇವಣಸಿದ್ದೇಶ್ವರ ಮಹಾ ಸಂಸ್ಥಾನ ಪೀಠದ ಬಸವರಾಜ ದೇವರು, ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಶಾಸಕರಾದ ಕುಸುಮಾವತಿ ಶಿವಳ್ಳಿ, ಅರವಿಂದ್ ಬೆಲ್ಲದ್, ಪ್ರಸಾದ ಅಬ್ಬಯ್ಯ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ನಾಳಿನ ಕಾರ್ಯಕ್ರಮದಲ್ಲಿ ಗೋಪನಕೊಪ್ಪದ ದಾನಿಗಳು ಮನಸೂರು ಮಠಕ್ಕೆ ಅಡುಗೆ ಪಾತ್ರೆಗಳನ್ನು ಕೊಡಲಿದ್ದು, ಅವರಿಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು ಸಮಾಜಮುಖಿ ಕಾರ್ಯನಿರ್ವಹಿಸಿದ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ನಾಳಿನ ಕಾರ್ಯಕ್ರಮಕ್ಕೆ ಅಪ್ಪು ವೇದಿಕೆ ಎಂದು ಹೆಸರಿಡಲಾಗಿದೆ ಎಂದು ಹೇಳಿದರು.
Kshetra Samachara
25/01/2022 02:07 pm