ವರದಿ: ಪ್ರಶಾಂತ ಲೋಕಾಪುರ,ಪಬ್ಲಿಕ್ ನೆಕ್ಸ್ಟ್ ಧಾರವಾಡ
ಧಾರವಾಡ : ಅಣ್ಣ-ತಂಗಿಯರ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿ 'ಅಣ್ಣ ತಂಗಿಯ ಈ ಬಂಧ ಇದು ಜನುಮ ಜನುಮಗಳ ಅನುಬಂಧ' ಎಂದು ತಂಗಿಯರು ತಮ್ಮ ಅಣ್ಣಂದಿರನ್ನು ಬಾಂಧವ್ಯದ ಮೂಲಕ ಕಟ್ಟಿ ಹಾಕುವ ಸುದಿನ ಸಮೀಪಿಸುತ್ತಿದೆ.ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬ ಸಹೋದರ-ಸಹೋದರಿಯರ ಭಾತೃತ್ವದ ಸಂಕೇತ.
ಈ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ತಹರೇವಾರಿ ರಾಖಿಗಳು ರಾರಾಜಿಸುತ್ತಿವೆ. ಎಲ್ಲಿ ನೋಡಿದರು ರಾಖಿಯದ್ದೆ ಸಡಗರ. ರಾಖಿ ಕೊಂಡುಕೊಳ್ಳಲು ಮುಗಿಬಿದ್ದಿರುವ ಸ್ತ್ರೀಯರು ತಮ್ಮ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ಸಂಬಂಧವನ್ನ ಬೆಸೆಯುವ ರಾಖಿ ಹಬ್ಬಕ್ಕೆ ನಗರದಾದ್ಯಂತ ನಡೆದಿರುವ ಭರ್ಜರಿ ಸಿದ್ಧತೆಗಳು ಹೇಗಿದೆ ನೀವೇ ನೋಡಿ!
ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ರಾಖಿ ಹಬ್ಬಕ್ಕೆ ಸಡಗರ ಸಂಭ್ರಮ ಇರಲಿಲ್ಲ ಆದರೆ ಈ ಬಾರಿ ಸ್ವಲ್ಪ ಅವಕಾಶ ಇರೋದರಿಂದ ಅವಳಿ ನಗರದ ಮಾರುಕಟ್ಟೆಯಲ್ಲಿ ರಾಖಿ ಕಲರವ ಕಂಗೊಳಿಸುತ್ತಿದೆ.
ಪಬ್ಲಿಕ್ ನೆಕ್ಸ್ಟ್ ಜೊತೆಗೆ ಖುಷಿ ಹಂಚಿಕೊಂಡ ರಾಖಿ ಕೊಳ್ಳಲು ಬಂದ ಸಿ.ಎಮ್ ನೇಹಾ ಕಳೆದ ವರ್ಷದ ಲಾಕ್ ಡೌನ್ ನಲ್ಲಿ ಪೋಸ್ಟ್ ಮುಖಾಂತರ ಅಣ್ಣನಿಗೆ ರಾಖಿ ಕಳುಹಿಸಿದ್ದೆ.ಆದರೆ ಈ ಬಾರಿ ಎದುರಿಗಿರುವ ಅಣ್ಣನಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ರಾಖಿ ಖರೀದಿಸಿ, ಸಿಹಿ ತಿನ್ನಿಸಿ ಸಂಭ್ರಮಿಸೊ ಉತ್ಸುಕತೆಯಲ್ಲಿದ್ದೇನೇ ಎಂದಿದ್ದಾರೆ.
ಇನ್ನೂ ಮಾರಾಟಗಾರೊಬ್ಬರು ಮಾತನಾಡಿ, ಕಳೆದ ವರ್ಷದ ಕೊರೊನಾನ ಸಂದಿಗ್ಧ ಸಮಯದಲ್ಲೂ 2 ರಿಂದ 3 ಲಕ್ಷ ಮೌಲ್ಯದ ರಾಖಿಗಳನ್ನ ತರಿಸಲಾಗಿತ್ತು. ಆದರೆ ವ್ಯಾಪಾರ ಮಾತ್ರ ಕಡಿಮೆಯಾಗಿತ್ತು.
ಅದೇ ರೀತಿ ಈ ಬಾರಿಯೂ ಸಹ ರಾಖಿಗಳನ್ನು ತರಿಸಿದ್ದೇವೆ. ಆದ್ರೆ ಅವುಗಳನ್ನು ಕೊಂಡುಕೊಳ್ಳಲು ಜನರೇ ಇಲ್ಲದಂತಾಗಿದೆ. ಎಲ್ಲರು ಆನ್ಲೈನ್ ಶಾಪಿಂಗಗೆ ಅಂಟಿಕೊಂಡಿದ್ದಾರೆ. ಆನ್ಲೈನ್ ನಲ್ಲಿ ಕಾಂಬೊ ಪ್ಯಾಕ್ ನಂತೆ ಆಫರ್ ಇಡ್ತಾರೆ, ಹೀಗಾಗಿ ಜನ ಅಲ್ಲೇ ಕೊಂಡ್ಕೋತ್ತಿದ್ದಾರೆ ಹೀಗಾಗಿ ನಮ್ಮ ಹತ್ರ ಯಾರು ಬರ್ತಿಲ್ಲ. ಕೊರೊನಾದಿಂದ ತತ್ತರಿಸಿದ್ದ ನಮಗೆ ಆನ್ಲೈನ್ ಶಾಪಿಂಗ್ ನಿಂದಲೂ ಹೊಡೆತ ಬೀಳ್ತಿದೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಒಟ್ಟಾರೆಯಾಗಿ ಬಂಧ ಬೆಸೆಯುವ ರಕ್ಷಾಬಂಧನದ ಹಬ್ಬಕ್ಕಾಗಿ ಭರದ ಸಿದ್ದತೆ ನಡೆದಿದೆ.
Kshetra Samachara
19/08/2021 03:05 pm