ಧಾರವಾಡ: ವಿದ್ಯಾರ್ಥಿ ದೆಸೆಯಲ್ಲಿಯೇ ನಟನೆ, ಅಭಿನಯ ಹಾಗೂ ವೇದಿಕೆ ಬಳಸಿಕೊಳ್ಳುವಂತಹ ಕಲೆಯನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು ಎಂದು ರಂಗಭೂಮಿ ಕಲಾವಿದ ಮಂಡ್ಯ ರಮೇಶ ಹೇಳಿದರು.
ಧಾರವಾಡದ ತಹಶೀಲ್ದಾರ ಕಚೇರಿ ಹತ್ತಿರ ಇರುವ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಮಂಡ್ಯ ರಮೇಶ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಲಿಯಬೇಕು ಎಂಬ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಸಾಧನೆ ಎಂಬುದು ಕೇವಲ ಸಾಧಿಸಿದವನ ಸ್ವತ್ತಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿದ್ಯಾರ್ಥಿ ಹಂತದಲ್ಲೇ ನಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿದಾಗ ಮಾತ್ರ ಸಾಧನೆಗೆ ವೇದಿಕೆಗಳು ಸಿಗಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾಭ್ಯಾಸದ ಜೊತೆ ಜೊತೆಗೆ ನಟನೆ, ಹಾಡುಗಾರಿಕೆ, ನಾಟಕ, ಭಾಷಣ ಕಲೆ, ಚಿತ್ರಕಲೆ, ಮಾತುಗಾರಿಕೆ ಹಾಗೂ ನಿರೂಪಣೆಯನ್ನು ಕಲಿಯಬೇಕು. ಪ್ರಾಮಾಣಿಕತೆ, ಶಿಸ್ತು, ಧ್ಯೇಯ, ಅಚಲವಾದ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಎಂತಹ ಪರಿಸ್ಥಿತಿ ಬಂದರೂ ಆ ಪರಿಸ್ಥಿತಿಯನ್ನು ಎದುರಿಸಲು ಕಲಿಯಬೇಕು, ರಂಗಭೂಮಿ ಉತ್ತಮವಾಗಿ ಮಾತನಾಡಲು ಕಲಿಸುತ್ತದೆ. ಪ್ರಸ್ತುತ ಸಮಯಕ್ಕೆ ಸಂಸ್ಕೃತಿ ಕಲಿಸುವ ಸಾಯಿ ಕಾಲೇಜಿನಂತಹ ಉತ್ತಮ ಕಾಲೇಜುಗಳ ಅವಶ್ಯಕತೆಯಿದೆ ಎಂದರು.
ನಂತರ ಅವರು ವಿವಿಧ ಕಲಾವಿದರೊಂದಿಗಿನ ಒಡನಾಟದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು. ಸಂಸ್ಥೆಯ ಅಧ್ಯಕ್ಷೆ ಡಾ.ವೀಣಾ ಬಿರಾದಾರ, ಪ್ರಾಚಾರ್ಯ ಪ್ರೊ. ನಾಗರಾಜ ಶಿರೂರ, ಮಹಾಂತೇಶ ನಾಡಗೌಡರ ಹಾಗೂ ಕಾಲೇಜಿನ ಉಪನ್ಯಾಸಕರು ಇದ್ದರು.
Kshetra Samachara
21/02/2021 09:50 am