ಹುಬ್ಬಳ್ಳಿ: ಹತ್ತು ಹಲವಾರು ಆರ್ಥಿಕ ಚಟುವಟಿಕೆಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ವಾಣಿಜ್ಯನಗರಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ ಈಗ ಮತ್ತೊಂದು ಗೌರವವದ ಗರಿಯನ್ನು ಮುಡಿಗೇರಿಸಿಕೊಳ್ಳಲು ಸಿದ್ದವಾಗಿದೆ.ಬಹುದಿನಗಳ ಕನಸು ನನಸಾಗುತ್ತಿದ್ದು,ವಾಣಿಜ್ಯನಗರಿ ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ.ಏನಿದು ಗೌರವ ಅಂತೀರಾ ಈ ಸ್ಟೋರಿ ನೋಡಿ.
ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಚೆನ್ನೈ ಹೊರತುಪಡಿಸಿದರೆ ಎರಡನೆ ಪ್ರಾಾದೇಶಿಕ ಕಚೇರಿ ಹೊಂದಿರುವ ನಗರವಾಗಿ ವಾಣಿಜ್ಯ ನಗರಿ ಗುರುತಿಸಿಕೊಳ್ಳಲಿದೆ.ಹೌದು..ಲಲಿತಕಲಾ ಅಕಾಡೆಮಿ ಕಚೇರಿ ಹುಬ್ಬಳ್ಳಿಯಲ್ಲಿ ಸ್ಥಾಪನೆಯ ಕುರಿತಂತೆ ಈಚೆಗೆ (ನ.26ರಂದು) ನಡೆದ ಸಭೆಯಲ್ಲಿ ಅಕಾಡೆಮಿಯ ಅಧ್ಯಕ್ಷ ಡಾ. ಉತ್ತಮ ಪಚಾರ್ನೆ ಅವರು ಪ್ರಸ್ತಾವಿಸಿದ್ದಾರೆ. ಅಕಾಡೆಮಿ ಸ್ಥಾಪನೆಗಾಗಿ ಬೆಳಗಾವಿ ಹಾಗೂ ಧಾರವಾಡದ ನಡುವೆ ಸಾಕಷ್ಟು ಪೈಪೂಟಿ ಇತ್ತು. ಲಲಿತಕಲಾ ಅಕಾಡೆಮಿ ಸದಸ್ಯ ಹಾಗೂ ವೈದ್ಯ ಡಾ. ಸೊನಾಲಿ ಸರ್ನೋಬತ್ ಅವರು ಎರಡು ಕಡೆಯ ಸಾಧಕ ಬಾಧಕಗಳ ಕುರಿತು ಅಕಾಡೆಮಿಗೆ ವರದಿ ನೀಡಿದ್ದರು. ಹುಬ್ಬಳ್ಳಿಯಲ್ಲಿ ಹೆಚ್ಚಿನ ಅನುಕೂಲತೆ ಇರುವುದರಿಂದ ಇಲ್ಲಿಯೆ ಪ್ರಾದೇಶಿಕ ಕಚೇರಿ ಸ್ಥಾಾಪನೆಗೆ ಕೇಂದ್ರ ಲಲಿತಕಲಾ ಅಕಾಡೆಮಿ ಒಲವು ತೋರಿದೆ ಎನ್ನಲಾಗಿದೆ.
ದೆಹಲಿ, ಮುಂಬೈ, ಚೆನ್ನೈ, ಭುವನೇಶ್ವರ, ಕೊಲ್ಕತ್ತಾ ಹಾಗೂ ಶಿಮ್ಲಾದಲ್ಲಿ ಮಾತ್ರ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಇದೆ. ಇದೀಗ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾದೇಶಿಕ ಕಚೇರಿ ಆರಂಭವಾದಲ್ಲಿ ಈ ಭಾಗದ ಕಲಾವಿದರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಲಾ ಪ್ರಕಾರಗಳಿಗೆ ಅಗತ್ಯ ಪ್ರೋತ್ಸಾಹ ಸಿಗಲಿದೆ. ಇಲ್ಲಿನ ವಿದ್ಯಾನಗರದ ಪೊಲೀಸ್ ಸ್ಟೇಷನ್ ಬಳಿಯ ಕಟ್ಟಡವನ್ನು ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿಗಾಗಿ ಗುರುತಿಸಲಾಗಿದೆ. ಆದರೆ, ಈ ಕಟ್ಟಡ ಸ್ವಲ್ಪ ಕಿರಿದಾಗಿದ್ದು, ಇದರ ನವೀಕರಣ ಆಗಬೇಕಿದೆ. ಇದಕ್ಕಾಗಿ ಅನುದಾನದ ಅಗತ್ಯವಿದ್ದು, ಅಕಾಡೆಮಿಗೆ ಕೋರಲಾಗಿದೆ.
ಪ್ರಾದೇಶಿಕ ಕಚೇರಿಯಲ್ಲಿ ಡಿಸ್‌ಪ್ಲೇ ಸೆಂಟರ್, ಗ್ರಂಥಾಲಯ, ಡಿಜಿಟಲ್ ಲ್ಯಾಬ್, ಎರಡು ಎಕ್ಸಿಬಿಷನ್ ಸೆಂಟರ್ ಇರಲಿದೆ. ಇದರ ಜತೆಗೆ 10-12 ಕಲಾವಿದರು ಏಕಕಾಲಕ್ಕೆ ಕಲಾಕೃತಿ ರಚಿಸಲು ಸಾಧ್ಯವಾಗುವಷ್ಟು ಸ್ಥಳಾವಕಾಶದ ಹಾಲ್, ಗ್ರಾಫಿಕ್, ಸಿರಾಮಿಕ್, ಶಿಲ್ಪಕಲೆ ಕಲಾಕೃತಿಗಳ ರಚನೆಗೆ ಅವಕಾಶ ಇಲ್ಲಿರಲಿದೆ. ಜತೆಗೆ ಸ್ಥಳೀಯ ಜಾನಪದ ಹಾಗೂ ಇತರೆ ಕಲಾವಿದರೂ ತಮ್ಮ ಪ್ರದರ್ಶನ ನೀಡಲು ಸಭಾಗೃಹ ನಿರ್ಮಾಣವಾಗಲಿದೆ.
ಇದರಿಂದಾಗಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುವುದಲ್ಲದೆ, ನಿರಂತರವಾಗಿ ಕಾರ್ಯಕ್ರಮಗಳು ಜರುಗಲು ಸಾಧ್ಯವಾಗುತ್ತದೆ. ಕಲಾವಿದರ ಕೇಂದ್ರ ಸ್ಥಾನವಾಗಿ ಇದು ಮಾರ್ಪಡಲಿದ್ದು, ದೇಶದ ವಿವಿಧ ಭಾಗಗಳ ಕಲಾ ಪ್ರದರ್ಶನಕ್ಕೂ ವೇದಿಕೆಯಾಗಲಿದೆ.
Kshetra Samachara
08/12/2020 06:27 pm