ಧಾರವಾಡ: ಬಿಆರ್ ಟಿಎಸ್ ಮಾರ್ಗದಲ್ಲಿ ಅಡ್ಡ ಬಂದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ, ‘ಚಿಗರಿ’ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಪಾದಚಾರಿ ಮೃತಪಟ್ಟಿದ್ದಾರೆ.
ನಗರದ ಪ್ರತಿಷ್ಠಿತ ವಿದ್ಯಾ ಪಿ. ಹಂಚಿನಮನಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಸುಧೀಂದ್ರ ಆರ್. ಹಂಚಿನಮನಿ (70) ಮೃತಪಟ್ಟವರು.
ನಾರಾಯಣ ಪುರದ ಸನ್ಮನತಿ ನಗರ ನಿವಾಸಿಯಾದ ಇವರು ಎನ್ ಟಿಟಿಎಫ್ ಬಳಿ ರಸ್ತೆ ದಾಟುತ್ತಿದ್ದರು.
ಕಾರ್ಯಕ್ರಮಕ್ಕೆ ಹೊರಟಿದ್ದ ಇವರು ರಸ್ತೆಯ ಒಂದು ಬದಿಯಲ್ಲಿ ಕಾರು ನಿಲ್ಲಿಸಿ, ಮತ್ತೊಂದು ಬದಿಯಲ್ಲಿದ್ದ ಅಂಗಡಿಗೆ ಹೋಗಿ ಮರಳುತ್ತಿದ್ದರು.
ಈ ವೇಳೆ ಮಾಳಮಡ್ಡಿ ಕಡೆಯಿಂದ ನೇರವಾಗಿ ಮುಖ್ಯರಸ್ತೆ ಪ್ರವೇಶಿಸಿದ ಬೈಕ್ ಸವಾರನನ್ನು ತಪ್ಪಿಸಲು ಹುಬ್ಬಳ್ಳಿ ಕಡೆಯಿಂದ ಬಂದ ಚಿಗರಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ನಂತರ ಸುಧೀಂದ್ರ ಅವರನ್ನೂ ಸೇರಿದಂತೆ, ಅಲ್ಲಿನ ಭದ್ರತಾ ಸಿಬ್ಬಂದಿ ಸಂಗೊಳ್ಳಿರಾಯಣ್ಣ ನಗರದ ಬಾಪು ಕ್ಷೀರಸಾಗರ ಎಂಬುವವರಿಗೂ ಗುದ್ದಿದೆ.
ತೀವ್ರವಾಗಿ ಗಾಯಗೊಂಡ ಸುಧೀಂದ್ರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಾಲಕನ ವಿರುದ್ಧ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
19/12/2020 09:31 am