ಗದಗ: ಅದು ನಿಜಕ್ಕೂ ಸಾವಿರಾರು ಜನರ ಆರೋಗ್ಯಕ್ಕೆ ಪೂರಕವಾಗಿದ್ದ ಆರೋಗ್ಯ ಧಾಮ. ಈ ಆರೋಗ್ಯ ಕೇಂದ್ರದ ಮೂಲಕ ಸಾರ್ವಜನಿಕರ ಸೇವೆ ಮಾಡಬೇಕಿದ್ದ ಸರ್ಕಾರ ಹಾಗೂ ಸರ್ಕಾರದ ಸೇವಕರು ಈಗ ಯಾರದೋ ಒತ್ತಡಕ್ಕೆ ಮಣಿದು ಸಾರ್ವಜನಿಕರಿಗೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬರಸಿಡಿಲು ಬಡೆದಂತಾಗಿದೆ. ಅಷ್ಟಕ್ಕೂ ಯಾವುದು ಆ ಆರೋಗ್ಯ ಧಾಮ...? ಅಲ್ಲಿ ನಡೆಯುತ್ತಿರುವುದಾದರೂ ಏನು ಅಂತೀರಾ ಇಲ್ಲಿದೆ ನೋಡಿ ಸ್ಪೋಟಕ ಮಾಹಿತಿ.
ಸರ್ಕಾರಿ ಆಸ್ಪತ್ರೆಗಳು ಎಂದರೆ ಅದು ಬಡವರ ಪಾಲಿನ ಸಂಜೀವಿನಿ ಅಂತಾರೇ. ಆದರೆ ಮುದ್ರಣ ಕಾಶಿ ಗದಗನ ಹೃದಯ ಭಾಗದಲ್ಲಿರುವ ಆ ಆಸ್ಪತ್ರೆಯು, ಸಕಲ ಸರ್ವ ಕಾಯಿಲೆಗೆ ಅನುಕೂಲವಾಗುವಂತಿದೆ. ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆ ಆಸ್ಪತ್ರೆಗೆ ಪ್ರತಿನಿತ್ಯ ಸಾಕಷ್ಟು ಜನ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ. ಆದರೆ ಇದೀಗ ಆಸ್ಪತ್ರೆ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿದ್ದಿದೆಯೋ ಗೊತ್ತಿಲ. ಏಕಾಏಕಿ ಆಸ್ಪತ್ರೆ ಶಿಫ್ಟ್ ಮಾಡಲು ಆಡಳಿತ ಮಂಡಳಿ ಮುಂದಾಗಿದ್ದಾರೆ.
ಹೌದು. ಗದಗ ನಗರದ ಕೆ.ಸಿ.ರಾಣಿ ರಸ್ತೆಯಲ್ಲಿರುವ ದಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಟೋರಿ ಇದು. ಈ ಭಾಗದ ಬಡ ಜನರಿಗೆ ಆಸ್ಪತ್ರೆ ವರದಾನವಾಗಿದೆ. ಗದಗ ಜಿಲ್ಲೆ ಅಷ್ಟೇ ಅಲ್ಲಾ ಅಕ್ಕ ಪಕ್ಕದ ಜಿಲ್ಲೆಯ ಅನೇಕ ಕಡೆಗಳಿಂದ ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಗರ್ಭಿಣಿಯರು, ಮಕ್ಕಳು, ಬಾಣಂತಿಯರು ಬಂದು ಇಲ್ಲಿ ಚಿಕಿತ್ಸೆ ಪಡೆದುಕೊಳ್ತಾರೆ. ಇದು ನಗರದ ಹೃದಯ ಭಾಗದಲ್ಲಿದ್ದು ಎಲ್ಲದಕ್ಕೂ ಅನುಕೂಲವಾಗಿದೆ.
ಆದರೆ ಈ ಆಸ್ಪತ್ರೆ ಮೇಲೆ ಅದ್ಯಾಕೋ ಅಧಿಕಾರಿಗಳ ವಕ್ರದೃಷ್ಟಿ ಬಿದ್ದಿದೆ. ಗದಗನಿಂದ ಸುಮಾರು ಆರೇಳು ಕಿಲೋಮೀಟರ್ ದೂರದಲ್ಲಿರೋ ಜೀಮ್ಸ್ ಆಸ್ಪತ್ರೆಗೆ ಇಲ್ಲಿನ ಹೆರಿಗೆ ಹಾಗೂ ಮಕ್ಕಳ ಚಿಕಿತ್ಸಾ ವಿಭಾಗವನ್ನ ಸ್ಥಳಾಂತರಿಸಲು ಮುಂದಾಗಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಅಂದರೆ ಖಾಸಗಿ ಆಸ್ಪತ್ರೆಯ ಒತ್ತಡಕ್ಕೆ ಮಣಿದು ಸರ್ಕಾರಿ ಅಧಿಕಾರಿಗಳು ಆಸ್ಪತ್ರೆಯನ್ನೇ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ ಎಂಬುವಂತ ಗಂಭೀರ ಆರೋಪವೊಂದು ಕೇಳಿ ಬರುತ್ತದೆ.
ಇನ್ನೂ ಈ ಆಸ್ಪತ್ರೆ ನಗರದ ಮಧ್ಯ ಭಾಗದಲ್ಲಿ ಇರುವುದರಿಂದ ಎಲ್ಲದಕ್ಕೂ ಅನುಕೂಲವಾಗಿದೆ. ರೋಗಿಗಳಿಗೆ ಹೋಗಿಬರಲು, ವಾಹನ ವ್ಯವಸ್ಥೆ, ಚಿಕಿತ್ಸೆ, ಔಷಧ, ಸ್ಕ್ಯಾನ್, ಕ್ಷ-ಕಿರಣ, ಬ್ಲೆಡ್ ಟೆಸ್ಟ್, ಊಟ, ಉಪಹಾರ ಹೀಗೆ ಅನೇಕ ಚೆಕಪ್ ಗಳಿಗೆ ತುಂಬಾನೆ ಅನುಕೂಲವಾಗಿದೆ. ಆದರೆ ಜಿಮ್ಸ್ ಗೆ ಶಿಫ್ಟ್ ಆದ್ರೆ ಅಲ್ಲಿ ಏನಾದ್ರು ಸಿಗಲಿಲ್ಲಾ ಅಂದ್ರೆ ಮತ್ತೆ ಸಿಟಿ ಗೆ ಬರಬೇಕು. ಹಾಗಾಗಿ ಈ ಆಸ್ಪತ್ರೆ ಸ್ಥಳಾಂತರ ಬೇಡ ಅಂತಿದ್ದಾರೆ. ಆದರೆ ಆಡಳಿತ ಮಂಡಳಿ ಸಮಜಾಯಿಷಿ ನೀಡುವ ಮೂಲಕ ಜನರ ಮೂಗಿಗೆ ತುಪ್ಪ ಒರೆಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಆಸ್ಪತ್ರೆಯ ಆಡಳಿತ ಯಾರಿಗೂ ಒಳ್ಳೆಯವರಾಗಲು ಹೋಗಿ ಇದ್ದವರ ಬಾಯಿಗೆ ಮಣ್ಣು ಹಾಕಲು ಮುಂದಾಗಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ಹಲವಾರು ಯೋಜನೆ ತರುವ ಸರ್ಕಾರ ಇಂತಹ ನಿರ್ಧಾರದಿಂದ ಜನರಿಗೆ ಸಮಸ್ಯೆ ಉಂಟು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬುವುದೇ ಸಾರ್ವಜನಿಕ ವಲಯದ ಯಕ್ಷ ಪ್ರಶ್ನೆಯಾಗಿದೆ.
PublicNext
14/05/2022 11:32 am