ಕಡಬ : ಕಡಬದ ಆಲಂಕಾರಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ರೇಬಿಸ್ ವೈರಸ್ ಸೋಂಕು ತಗಲಿ ಮೃತಪಟ್ಟ ಘಟನೆ ನಡೆದಿದೆ. ಆಲಂಕಾರು ಗ್ರಾಮದ ಕೆದಿಲ ನಿವಾಸಿ ವಿನ್ಸಿ ಸಾರಮ್ಮ(17) ಮೃತ ಬಾಲಕಿ.
ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದ ಈಕೆಗೆ ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ತೀವ್ರ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಸಂಜೆ ವೇಳೆ ತಲೆನೋವು ಉಲ್ಬಣಗೊಂಡಿದ್ದರಿಂದ ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಿ ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡ ರಾತ್ರಿ ವಿನ್ಸಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸುಮಾರು 4 ತಿಂಗಳ ಹಿಂದೆ ಆಲಂಕಾರು ಪೇಟೆ ಸೇರಿದಂತೆ ಮೃತಳ ಮನೆಯ ಸುತ್ತಮುತ್ತ ಹುಚ್ಚು ನಾಯಿಯೊಂದು ಕಾಣಿಸಿಕೊಂಡಿದ್ದು, ಈ ವೇಳೆ ಅಲಂಕಾರು ಪೇಟೆಯಲ್ಲಿರುವ ಬೀದಿನಾಯಿ ಸೇರಿದಂತೆ ಇಬ್ಬರ ಮೇಲೆಯೂ ದಾಳಿ ನಡೆಸಿತ್ತು. ಮೃತಳ ಮನೆಯ ನಾಯಿಯು ಕೆಲವು ದಿನಗಳ ಹಿಂದೆ ರೇಬಿಸ್ ಗೆ ಒಳಗಾಗಿ ಸಾವನ್ನಪ್ಪಿತ್ತು.
ಮನೆ ನಾಯಿಯಿಂದ ವೈರಸ್ ವಿದ್ಯಾರ್ಥಿನಿಗೂ ತಗಲಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ವಿವರಗಳು ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿಯ ನಂತರವಷ್ಟೇ ತಿಳಿದುಬರಬೇಕಿದೆ. ವಿದ್ಯಾರ್ಥಿನಿಯ ಅಣ್ಣ ಮೂರು ವರ್ಷಗಳ ಹಿಂದೆ ನದಿ ನೀರಿಗೆ ಬಿದ್ದು ಮೃತಪಟ್ಟಿದ್ದ.
PublicNext
02/10/2021 11:33 am