ನವದೆಹಲಿ: ‘ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ಗುಜರಾತ್ ರಾಜ್ಯಗಳಲ್ಲಿ ಹಕ್ಕಿಜ್ವರ ಕಂಡುಬಂದಿದೆ. ರೋಗ ಪ್ರಸರಣವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಈ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ರೋಗ ಪ್ರಸರಣವಾಗುವುದನ್ನು ತಡೆಯಲು ಕೈಗೊಂಡ ಕ್ರಮಗಳ ಪರಿಶೀಲನೆ, ರೋಗಗ್ರಸ್ತ ಹಕ್ಕಿಗಳ ವಿಲೇವಾರಿ ಮೇಲ್ವಿಚಾರಣೆಗಾಗಿ ಕೇರಳ ಮತ್ತು ಹಿಮಾಚಲ ಪ್ರದೇಶಗಳಿಗೆ ಕೇಂದ್ರದ ತಂಡಗಳನ್ನು ಕಳಿಸಲಾಗಿದೆ.
ದೇಶದಲ್ಲಿ ಪಕ್ಷಿ ಜ್ವರ ಬಾಧಿತ ಪ್ರದೇಶಗಳಲ್ಲಿ ಇರುವ ಪರಿಸ್ಥಿತಿ ಅವಲೋಕಿಸಲು ಕೇಂದ್ರ ತಂಡಗಳು ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ.
ಪಕ್ಷಿ ಜ್ವರದ ಬಗ್ಗೆ ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಲ ಮೂಲಗಳು, ಜೀವಂತ ಹಕ್ಕಿಗಳಿರುವ ಮಾರುಕಟ್ಟೆಗಳು, ಮೃಗಾಲಯ, ಕೋಳಿಸಾಕಾಣಿಕೆ ಕೇಂದ್ರಗಳು, ಮತ್ತಿತರ ಪ್ರದೇಶಗಳ ಆಸು ಪಾಸಿನಲ್ಲಿ ಕಣ್ಗಾವಲು ಹೆಚ್ಚಿಸಬೇಕು.
ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಸೂಕ್ತ ರೀತಿಯಲ್ಲಿ ವಿಲೇವಾರಿ ವ್ಯವಸ್ಥೆ ಮಾಡುವ ಜತೆಗೆ ಜೈವಿಕ ಸುರಕ್ಷತೆಯನ್ನು ಬಲಗೊಳಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.
PublicNext
11/01/2021 01:45 pm