ನವದೆಹಲಿ: ಇನ್ಮುಂದೆ ದೇಶದಲ್ಲಿ ಸೂರ್ಯಾಸ್ತದ ಬಳಿಕವೂ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವರು, "ಬ್ರಿಟಿಷರ ಕಾಲದ ಹಳೆ ವ್ಯವಸ್ಥೆ ಕೊನೆಗೊಂಡಿದೆ. ಇನ್ನು ಮುಂದಿಗೆ ದಿನದ 24 ಗಂಟೆಗಳ ಕಾಲವೂ ಮರಣೋತ್ತರ ಪರೀಕ್ಷೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ 'ಉತ್ತಮ ಆಡಳಿತ' ಕಲ್ಪನೆಯನ್ನು ಮುಂದಿಟ್ಟುಕೊಂಡು ಮಹತ್ವದ ಹೆಜ್ಜೆ ಇಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸುವ ಸೌಲಭ್ಯವನ್ನು ಹೊಂದಿರುವ ಆಸ್ಪತ್ರೆಗಳು ಇನ್ನುಮುಂದೆ ಸೂರ್ಯಾಸ್ತದ ನಂತರವೂ ಮರಣೋತ್ತರ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಅಂಗಾಂಗ ದಾನದ ಮರಣೋತ್ತರ ಪರೀಕ್ಷೆಗಳನ್ನು ಆದ್ಯತೆಯ ಆಧಾರದ ಮೇಲೆ ಮಾಡಬೇಕು ಮತ್ತು ಅಂತಹ ಮರಣೋತ್ತರ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸಲು ಮೂಲಸೌಕರ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಸೂರ್ಯಾಸ್ತದ ನಂತರವೂ ಪರೀಕ್ಷೆ ಮಾಡಬಹುದು ಎಂದು ಹೊಸ ಪ್ರೋಟೋಕಾಲ್ ಹೇಳುತ್ತದೆ. ಈ ನಿರ್ಧಾರದಲ್ಲಿ ಆರೋಗ್ಯ ಸಚಿವಾಲಯವು ಯಾವುದೇ ಅನುಮಾನಗಳನ್ನು ನಿವಾರಿಸಲು ಮತ್ತು ಕಾನೂನು ಉದ್ದೇಶಗಳಿಗಾಗಿ ರಾತ್ರಿ ಎಲ್ಲಾ ಮರಣೋತ್ತರ ಪರೀಕ್ಷೆಗಳಿಗೆ ಮರಣೋತ್ತರ ಪರೀಕ್ಷೆಯ ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು ಎಂದು ಹೇಳಿದೆ.
PublicNext
16/11/2021 11:02 am