ಬೆಂಗಳೂರು : ಕೋವಿಡ್ ಮಧ್ಯೆಯೇ ಈಗಾ ರೂಪಾಂತರಿ ವೈರಸ್ ಒಮಿಕ್ರಾನ್ ಆತಂಕ ಹೆಚ್ಚಾದ ಬೆನ್ನಲ್ಲೇ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿದೆ ಇಂದಿನಿಂದ 10 ದಿನಳ ಕಾಲ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಇಂದು (ಮಂಗಳವಾರ) ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ವಾಣಿಜ್ಯ ಚಟುವಟಿಕೆ ಹಾಗೂ ಅನಗತ್ಯ ಸಂಚಾರಕ್ಕೆ ನಿರ್ಬಂಧ ಇರಲಿದೆ.
ಮುಂದಿನ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಈ ಕ್ರಮ ಜಾರಿಯಲ್ಲಿರಲಿದೆ. ಜತೆಗೆ ಸಭೆ, ಸಮಾರಂಭ, ಸಮಾವೇಶ, ಮದುವೆ ಕಾರ್ಯಕ್ರಮಗಳಲ್ಲಿ 300ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂಬ ನಿಯಮವೂ ಅನ್ವಯವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಸಭೆ ಬಳಿಕ ರಾತ್ರಿ ಕರ್ಫ್ಯೂ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಇದರನ್ವಯ ರಾಜ್ಯದಲ್ಲಿ ಡಿ.28 ರಿಂದ ರಾತ್ರಿ ಬರುವ ಜ.7ರ ಬೆಳಗ್ಗೆ 5ಗಂಟೆವರೆಗೆ ರಾತ್ರಿ ಕ ಕರ್ಫ್ಯೂ ಜಾರಿಯಲ್ಲಿರಲಿದೆ.
ಈ ಅವಧಿಯಲ್ಲಿ ಅನಗತ್ಯ ಸುತ್ತಾಟ, ಜನ ಸೇರುವಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳು, ಬಾರ್, ಪಬ್, ರೆಸ್ಟೋರೆಂಟ್, ಚಲನಚಿತ್ರಮಂದಿರ ಸೇರಿದಂತೆ ಅಗತ್ಯಸೇವೆಯಲ್ಲದ ಯಾವುದೇ ವಾಣಿಜ್ಯ ಚಟುವಟಿಕೆಗೂ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ರಾತ್ರಿ ಕರ್ಫ್ಯೂ ನಿರ್ಬಂಧದಿಂದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ರೋಗಿಗಳು ಹಾಗೂ ಅವರ ಸಹಾಯಕರು, ಪೋಷಕರು ತುರ್ತು ಅಗತ್ಯವಿದ್ದಾಗ ಸಂಚರಿಸಬಹುದು. ರಾತ್ರಿ ಪಾಳಿಯೂ ಕಾರ್ಯನಿರ್ವಹಿಸುವ ಉದ್ಯೋಗಿಗಳು, ಟೆಲಿಕಾಂ ಸೇವಾ ಕಂಪೆನಿಗಳ ಸಿಬ್ಬಂದಿ ತಮ್ಮ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು.
ಸರಕು ಸಾಗಣೆ ವಾಹನಗಳಿಗೆ (ಖಾಲಿ ವಾಹನವೂ ಸೇರಿದಂತೆ) ನಿರ್ಬಂಧವಿಲ್ಲ. ಇ ಕಾಮರ್ಸ್, ಆಹಾರ ಸೇರಿದಂತೆ ಹೋಂ ಡೆಲಿವರಿ ನೀಡುವ ಉದ್ಯೋಗಿಗಳು, ವೈದ್ಯಕೀಯ, ತುರ್ತು ಹಾಗೂ ಅಗತ್ಯ ಸೇವೆಗಳು, ಔಷಧ ಮಳಿಗೆಗಳು ಕಾರ್ಯ ನಿರ್ವಹಿಸಬಹುದು.
ಸಾರ್ವಜನಿಕ ಸಾರಿಗೆಗೆ ನಿರ್ಬಂಧವಿಲ್ಲ:
ಬಸ್ಸು, ರೈಲು, ಮೆಟ್ರೋ ಹಾಗೂ ವಿಮಾನಗಳು ಯಥಾಪ್ರಕಾರ ಸಂಚರಿಸುತ್ತವೆ. ಹೀಗಾಗಿ ಬಸ್ಸು, ರೈಲು, ವಿಮಾನ ನಿಲ್ದಾಣ, ತುರ್ತು ಅಗತ್ಯಗಳಿಗೆ ಸಂಚರಿಸಲು ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು, ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿದೆ. ಬಸ್ಸು ನಿಲ್ದಾಣ, ರೈಲು, ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವವರು ಪ್ರಯಾಣದ ದಾಖಲೆ (ಟಿಕೆಟ್) ಹೊಂದಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
PublicNext
28/12/2021 09:09 am