ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೂಪಾಂತರಿ ತಡೆಗೆ ಬಿಗಿ ನಿಯಮ ಬೇಲಿ; ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಹೊಸ ರೂಪಾಂತರಿ ಒಮಿಕ್ರಾನ್ ವೈರಾಣು ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಮಟ್ಟಹಾಕಲು ಲಸಿಕೆ ವಿತರಣೆಗೆ ವೇಗ, ನೆರೆ ರಾಜ್ಯಗಳಿಂದ ಬರುವವರಿಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ, ಗಡಿ ಜಿಲ್ಲೆಗಳಲ್ಲಿ ಬಿಗಿ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದ್ದು, ಹೊಸ ಮಾರ್ಗಸೂಚಿ ಭಾನುವಾರ ಪ್ರಕಟವಾಗಲಿದೆ. ಸರ್ಕಾರಿ ಕಚೇರಿಗಳು, ಮಾಲ್​ಗಳು, ಸಿನಿಮಾ ಹಾಲ್, ರೆಸ್ಟೋರೆಂಟ್ ಹಾಗೂ ಹೋಟೆಲ್​ಗಳಲ್ಲಿ ಕೆಲಸ ಮಾಡುವವರು 2 ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ. ಇಲ್ಲವಾದರೆ ಪ್ರವೇಶವಿಲ್ಲವೆಂಬ ಸ್ಪಷ್ಟ ಸೂಚನೆ ನೀಡಿದೆ. ಶಾಲೆ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ ಮತ್ತು ಸಂವಾದಗಳನ್ನು ತಾತ್ಕಾಲಿಕವಾಗಿ ಮುಂದೂಡಲು ಆದೇಶಿಸಿದೆ. ಅಲ್ಲದೆ, ಕ್ರಿಸ್​ವುಸ್ ಮತ್ತು ಹೊಸ ವರ್ಷ ಸಂಭ್ರಮಾಚರಣೆ ಕುರಿತು ರ್ಚಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಮ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಿದೆ.

ಸಿಎಂ ತುರ್ತು ಸಭೆ: ದಕ್ಷಿಣ ಆಫ್ರಿಕಾ ಸೇರಿದಂತೆ 4 ದೇಶಗಳಲ್ಲಿ ಕರೊನಾ ವೈರಾಣು ಹೊಸ ಪ್ರಭೇದ ‘ಒಮಿಕ್ರಾನ್’ ಪತ್ತೆಯಾಗಿರುವ ನಡುವೆಯೇ ರಾಜ್ಯ ದಲ್ಲೂ ಕೆಲವು ಜಿಲ್ಲೆಗಳಲ್ಲಿ ಕರೊನಾ ಸೋಂಕು ಸ್ಪೋಟಿಸಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ತುರ್ತು ಸಭೆ ಕರೆದು ಸಚಿವರು, ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ರ್ಚಚಿಸಿದರು. ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಗುಲಿದ ಸೋಂಕಿಗೆ ಕಾರಣ, ವೈರಾಣು ಸ್ವರೂಪ ಇನ್ನೂ ದೃಢಪಟ್ಟಿಲ್ಲ. ಆದರೂ ಜನರ ಜೀವ-ಜೀವನದ ರಕ್ಷಣೆ ದೃಷ್ಟಿಯಿಂದ ಬಿಗಿ ನಿರ್ಬಂಧಗಳ ಮೂಲಕ ಸೋಂಕು ನಿಯಂತ್ರಿಸುವುದಕ್ಕೆ ಮೊದಲ ಆದ್ಯತೆ ನೀಡಲು ನಿರ್ಧರಿಸಿದೆ. ಸಭೆಯ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಭೆಯಲ್ಲಿ ರ್ಚಚಿತ ವಿಷಯಗಳು ಮತ್ತು ಕೈಗೊಂಡ ನಿರ್ಧಾರಗಳನ್ನು ವಿವರಿಸಿದರು.

ಸಾಹಸಕ್ಕೆ ಕೈಹಾಕದ ಸರ್ಕಾರ: ದೈನಂದಿನ ಚಟುವಟಿಕೆಗಳು, ಉದ್ಯಮ-ವಹಿವಾಟು, ಆರ್ಥಿಕತೆ ಚೇತರಿಕೆ ಹಂತದಲ್ಲಿರುವಾಗ ಹೆಚ್ಚಿನ ನಿರ್ಬಂಧ ಹೇರುವ ಸಾಹಸಕ್ಕೆ ಸರ್ಕಾರ ಕೈಹಾಕಿಲ್ಲ. ಕರೊನಾ ಮೊದಲ, 2ನೇ ಅಲೆಯ ವೇಳೆ ವಿಧಿಸಿದ ಕಠಿಣ ನಿರ್ಬಂಧಗಳನ್ನು ಜಾರಿ ಮಾಡುವುದು ಸೂಕ್ತವೆಂದು ಕೆಲ ತಜ್ಞರು ಪರೋಕ್ಷ ಇಂಗಿತ ವ್ಯಕ್ತಪಡಿಸಿದ್ದು, ಸಿಎಂ ಒಲವು ತೋರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಡಿಸಿಗಳಿಗೆ ಜವಾಬ್ದಾರಿ: ಉನ್ನತ ಮಟ್ಟದ ತುರ್ತು ಸಭೆಗೆ ಮುನ್ನವೇ ಕೇರಳ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಜಿಲ್ಲೆಗಳು ಮತ್ತು ಸೋಂಕು ಉಲ್ಬಣಿಸಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೂ ಬೊಮ್ಮಾಯಿ ವಿಡಿಯೋ ಸಂವಾದ ನಡೆಸಿದರು. ಪ್ರತಿಬಾರಿ ಗಡಿ ಜಿಲ್ಲೆಗಳ ಮೂಲಕವೇ ಸೋಂಕು ರಾಜ್ಯಕ್ಕೆ ಅಪ್ಪಳಿಸಿದೆ. ಹೀಗಾಗಿ ಚೆಕ್ ಪೋಸ್ಟ್​ಗಳನ್ನು ಜಾಗೃತ ಸ್ಥಿತಿಯಲ್ಲಿರಿಸಿ, ತಪಾಸಣೆ ಹಾಗೂ ಪರೀಕ್ಷೆ ಕಡ್ಡಾಯ ನಿಯಮ ಪಾಲಿಸಬೇಕು ಎಂಬ ಸೂಚನೆಯನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ. ಧಾರವಾಡ, ದಕ್ಷಿಣಕನ್ನಡ, ಉಡುಪಿ, ಬೆಂಗಳೂರು ನಗರ, ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಗಳ ಡಿಸಿಗಳು, ಬಿಬಿಎಂಪಿ ಆಯುಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಇಂದು ಮಾರ್ಗಸೂಚಿ:ಆರೋಗ್ಯದ ಮುನ್ನೆಚ್ಚರಿಕೆ ಕ್ರಮಗಳು, ಸಾರ್ವಜನಿಕರು ಪಾಲಿಸಬೇಕಾದ ನಿರ್ಬಂಧಗಳ ಕುರಿತು ಹೊಸ ಮಾರ್ಗಸೂಚಿ ಭಾನುವಾರ ಪ್ರಕಟವಾಗಲಿದೆ. ರಾಜ್ಯ, ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ, ಕಟ್ಟುನಿಟ್ಟಿನ ಕ್ರಮಗಳು ಚಾಚೂ ತಪ್ಪದಂತೆ ಜಾರಿಗೆ ಕ್ರಮವಹಿಸಬೇಕು ಎಂದು ಸರ್ಕಾರ ಸೂಚನೆ ನೀಡಲಿದೆ.

ಮುಂಚೂಣಿ ಕಾರ್ಯಕರ್ತ ರಿಗೆ ಬೂಸ್ಟರ್ ಡೋಸ್ ಲಸಿಕೆ ವಿತರಿಸಲು ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಮಾಡಿದ್ದರ ಬಗ್ಗೆ ಚರ್ಚೆಯಾಗಿದೆ. ಕೇಂದ್ರ ಅನುಮತಿ ಕೊಟ್ಟರೆ ಬೂಸ್ಟರ್ ಡೋಸ್ ವಿತರಿಸಲು ಸರ್ಕಾರ ಸಿದ್ಧ.

| ಆರ್.ಅಶೋಕ್ ಕಂದಾಯ ಸಚಿವ

ಗಡಿಯಲ್ಲಿ ಕಟ್ಟೆಚ್ಚರ

* ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ನೆಗೆಟಿವ್ ವರದಿ ಹಾಗೂ ಪರೀಕ್ಷೆ ಕಡ್ಡಾಯ

* 3 ಪಾಳಿಗಳಲ್ಲಿ ಕೆಲಸದ ವ್ಯವಸ್ಥೆ, ಎಲ್ಲ ಇಲಾಖೆಗಳ ಸಹಕಾರ ಪಡೆಯಲು ಡಿಸಿ ಗಳಿಗೆ ಸೂಚನೆ

* 16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್​ಟಿಪಿಸಿಆರ್ ಟೆಸ್ಟ್

* ಹಾಸ್ಟೆಲ್​ಗಳಲ್ಲಿರುವ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಬಂದ ನಂತರದ ಏಳನೇ ದಿನಕ್ಕೆ ಮತ್ತೊಮ್ಮೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ

* ಹೋಟೆಲ್, ರೆಸ್ಟೋರೆಂಟ್​ಗಳು, ಸಿನಿಮಾ ಹಾಲ್​ಗಳು, ಈಜುಕೊಳ, ಸಾರ್ವಜನಿಕ ಗ್ರಂಥಾಲಯ, ಜೈವಿಕ ಉದ್ಯಾನವನಗಳ ಕೆಲಸಗಾರರು 2 ಡೋಸ್ ಲಸಿಕೆ ಪಡೆದಿರಲೇಬೇಕು

* ವೈದ್ಯ ಹಾಗೂ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಹೆಚ್ಚಳ

ತಜ್ಞರು ಹೇಳಿದ್ದೇನು ?

* ಕರೊನಾ ಹೊಸ ರೂಪಾಂತರಿ ಹರಡುವಿಕೆ ವೇಗ ಐದುಪಟ್ಟು ಜಾಸ್ತಿ

* ಸೋಂಕಿನ ತೀವ್ರತೆಯೂ ಹೆಚ್ಚಿರುವ ಕಾರಣ ಗಂಭೀರ ಪರಿಗಣನೆ

* ವಿವಿಧ ಸ್ತರದ ಆರೋಗ್ಯ ವ್ಯವಸ್ಥೆ, ಪರಿಕರಗಳ ಸೃಜನೆ

* ವೈದ್ಯರು, ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿರಲಿ

* ಎರಡೂ ಡೋಸ್ ಲಸಿಕೆ ವಿತರಣೆಗೆ ಹೆಚ್ಚಿನ ಒತ್ತು

* ಸಮರೋಪಾದಿ ಪತ್ತೆ, ತಪಾಸಣೆ, ಚಿಕಿತ್ಸೆಗೆ ಆದ್ಯತೆ

* ಲಸಿಕೆ ಪಡೆದರೂ ಸೋಂಕು ತಗುಲಿದವರ ಮೇಲೆ ಹೆಚ್ಚಿನ ನಿಗಾ

* ಸಭೆ-ಸಮಾರಂಭ, ಉತ್ಸವ, ಕಾರ್ಯಕ್ರಮಗಳಲ್ಲಿ ನಿಯಮಗಳ ಪಾಲನೆ ಕಡ್ಡಾಯ

* ವಿದೇಶಿ ಪ್ರಯಾಣಿಕರಲ್ಲಿ ನೆಗೆಟಿವ್ ವರದಿಯಿದ್ದರೂ ಟೆಸ್ಟ್

* ಎಸ್​ಡಿಎಂನಲ್ಲಿ ಮತ್ತೆ 77 ಕೋವಿಡ್ ಕೇಸ್

ಧಾರವಾಡ: ಎಸ್​ಡಿಎಂ ಮೆಡಿಕಲ್ ಕಾಲೇಜು, ಆಸ್ಪತ್ರೆಯಲ್ಲಿ ಭೀತಿ ಹಬ್ಬಿಸಿರುವ ಕೋವಿಡ್ ಸೋಂಕು ಶನಿವಾರ ಬೆಳಗ್ಗೆ ಮತ್ತೆ 77 ಜನರಲ್ಲಿ ದೃಢಪಟ್ಟಿದೆ. ಕಳೆದ 2 ದಿನಗಳಲ್ಲಿ 204 ಜನರಲ್ಲಿ ಹಾಗೂ ಶನಿವಾರ ಹೊಸದಾಗಿ 77 ಸೇರಿ ಒಟ್ಟು 281 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಲ್ಲರಿಗೂ ಚಿಕಿತ್ಸೆ, ಔಷಧೋಪಚಾರ ನಡೆಯುತ್ತಿದೆ. ಸೋಂಕಿತರನ್ನು ಕ್ವಾರಂಟೖನ್ ಮಾಡಲಾಗಿದೆ. ತಪಾಸಣೆಗೆ ಒಳಪಟ್ಟವರನ್ನು ಪ್ರತ್ಯೇಕವಾಗಿ ಇರಿಸಲು ಸೂಚಿಸಲಾಗಿದೆ. ಇನ್ನೂ 1,822 ಜನರ ತಪಾಸಣಾ ವರದಿಗಳು ಬರಬೇಕಾಗಿದೆ ಎಂದು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಸ್​ಡಿಎಂ ಆಸ್ಪತ್ರೆಯ ಆವರಣ, ಒಪಿಡಿ, ಇತರೆಡೆ ಸ್ಯಾನಿಟೈಸ್ ಮಾಡಲಾಗಿದೆ. ಭಾನುವಾರದವರೆಗೆ ಒಪಿಡಿ ಬಂದ್ ಮಾಡಲಾಗಿದ್ದು, ಒಳರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಸಂಸ್ಥೆಯ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳದಲ್ಲಿದ್ದು, ಬಂದೋಬಸ್ತ್ ಕೈಗೊಂಡಿದ್ದಾರೆ.

ಕೃಪೆ: ವಿಜಯವಾಣಿ

Edited By : Vijay Kumar
PublicNext

PublicNext

28/11/2021 02:10 pm

Cinque Terre

43.85 K

Cinque Terre

0