ಕೊಲ್ಕತ್ತಾ: ಹೆಚ್ಚುತ್ತಿದೆ ಹೆಮ್ಮಾರಿ ಹಾವಳಿ ಭಯಭೀತರಾದ ಜನ ಲಸಿಕೆ ಪಡೆಯಲು ಹವಣಿಸುತ್ತಿದ್ದಾರೆ. ಇದರ ಮಧ್ಯೆ ಪಶ್ಚಿಮ ಬಂಗಾಳದ ಜಲ ಪೈಗುರಿ ಜಿಲ್ಲೆಯ ಕೋವಿಡ್-19 ಲಸಿಕಾ ಕೇಂದ್ರವೊಂದರ ಬಳಿ ಕಾಲ್ತುಳಿತ ಸಂಭವಿಸಿದ್ದು, ಸುಮಾರು 10 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಐವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಉತ್ತರ ಬಂಗಾಳದ ಜಲಪೈ ಗುರಿಯ ದುಪ್ಗುರಿ ಬ್ಲಾಕ್ ನಲ್ಲಿ ಲಸಿಕಾ ಕೇಂದ್ರವಾಗಿ ಶಾಲೆಯೊಂದನ್ನು ಪರಿವರ್ತಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಟೀ ಗಾರ್ಡನ್ ಜನರಿಂದ ಒಮ್ಮೆಲ್ಲೆ ನೂಕು ನೂಗಲು ಉಂಟಾದ್ದರಿಂದ ಈ ಘಟನೆ ಸಂಭವಿಸಿದೆ. ಸುಮಾರು 2 ಸಾವಿರ ಜನರು ಲಸಿಕಾ ಕೇಂದ್ರದ ಬಳಿ ನೆರೆದಿದ್ದರು. ಅಲ್ಲಿ ಯಾವುದೇ ಪೊಲೀಸರನ್ನು ನಿಯೋಜಿಸಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಪಾರ ಪ್ರಮಾಣದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಪರಿಸ್ಥಿತಿ ತಹಬದಿಗೆ ಬಂದಿದೆ. ಸ್ಥಳೀಯರು ಕೂಡಾ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾಗಿದ್ದಾರೆ. ಘಟನೆಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದಾರೆ. ಆದರೆ ಅವರಲ್ಲಿ 15 ಜನರಿಗೆ ಪ್ರಾಥಮಿಕ ಉಪಚರದ ನಂತರ ವಾಪಸ್ ಕಳುಹಿಸಲಾಗಿದೆ. ಐವರು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಜಲ್ ಪೈಗುರಿ ಪೊಲೀಸ್ ಮಹಾನಿರ್ದೇಶಕ ದೆಬೊರ್ಷಿ ದತ್ತ ಹೇಳಿದ್ದಾರೆ.
PublicNext
01/09/2021 01:00 pm