ಮುಂಬೈ: ಹಲವು ಔಷಧೀಯ ಸಂಶೋಧನಾ ಸಂಸ್ಥೆಗಳು ಕೊರೊನಾ ಲಸಿಕೆ ಅಭಿವೃದ್ಧಿ, ಪ್ರಯೋಗ, ಪರೀಕ್ಷೆಯಲ್ಲಿ ತೊಡಗಿವೆ. ಇತ್ತ ರಾಷ್ಟ್ರಗಳು ತಮಗೆ ಅಗತ್ಯ ಇರುವಷ್ಟು ಡೋಸ್ ಲಸಿಕೆಯನ್ನು ಪಡೆಯಲು ಕಾತುರದಿಂದ ಕಾಯುತ್ತಿವೆ. ಆದರೆ ಲಸಿಕೆಯಲ್ಲಿ ಹಂದಿಮಾಂಸದಿಂದ ಪಡೆದ ಜಿಲಾಟಿನ್ನ್ನು ಸ್ಟೆಬಿಲೈಸರ್ ಆಗಿ ಬಳಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಲಸಿಕೆ ಶೇಖರಣೆ, ಸಾಗಣೆ ಮಾಡುವಾಗ ಕೆಡದಂತೆ, ದೀರ್ಘಕಾಲ ಸ್ಥಿರವಾಗಿ ಉಳಿಯಲು ಹಂದಿಮಾಂಸದ ಜಿಲಾಟಿನ್ ತುಂಬ ಪರಿಣಾಮಕಾರಿ. ಆದರೆ ಇದೇ ಈಗ ಮುಸ್ಲಿಂ ಧಾರ್ಮಿಕ ಮುಖಂಡರ ವಿರೋಧಕ್ಕೆ ಕಾರಣವಾಗಿದೆ. ಆದಾಗ್ಯೂ ಕೆಲವು ಕಂಪನಿಗಳು ಹಂದಿ ಮಾಂಸದ ಜಿಲಾಟಿನ್ ಬಳಸದೆ ಲಸಿಕೆ ತಯಾರಿಸಲು ವರ್ಷದಿಂದಲೂ ಪ್ರಯತ್ನ ಮಾಡುತ್ತಿವೆ.
ಈ ಸಂಬಂಧ ಹಿಂದೆ ಇಂಡೋನೇಷ್ಯಾದಲ್ಲಿಯೂ ವಿವಾದ ಉಂಟಾಗಿತ್ತು. ಲಸಿಕೆ ತಿರಸ್ಕರಿಸುವಂತೆ ಇಸ್ಲಾಂನ ಕೆಲವು ಧಾರ್ಮಿಕ ಗುರುಗಳು ಕರೆ ನೀಡಿದ್ದರು. ಈ ಲಸಿಕೆ ತೆಗೆದುಕೊಳ್ಳುವುದೇ ಬೇಡ ಎಂದಿದ್ದರು. ಆದರೆ ನಿನ್ನೆಯಷ್ಟೇ, ತಮ್ಮ ಈ ನಿಲುವನ್ನು ಬದಲಿಸಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಇಸ್ಲಾಂ ಪ್ರಾಧಿಕಾರವು ಇದು ಸಾವುನೋವಿನ ಪ್ರಶ್ನೆಯಾಗಿರುವ ಕಾರಣ, ಹಂದಿ ಮಾಂಸದ ಜಿಲಾಟಿನ್ ಅಂಶವಿದ್ದರೂ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದೆ.
ಮುಂಬೈನಲ್ಲಿ ಇಂದು ನಡೆದಿರುವ ಸುನ್ನಿ ಮುಸ್ಲಿಂ ಉಲೆಮಾಗಳ ಚರ್ಚೆಯಲ್ಲಿ ಈ ಲಸಿಕೆಯನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು ಎಂದು ತೀರ್ಮಾನಿಸಲಾಗಿದೆ. ಮುಸ್ಲಿಂ ವಿದ್ವಾಂಸರು ಇಂದು ಮುಂಬೈನಲ್ಲಿ ಭೇಟಿಯಾಗಿದ್ದು, ಹಂದಿಗೂ ಇಸ್ಲಾಂ ಧರ್ಮಕ್ಕೂ ಆಗಿಬರದ ಹಿನ್ನೆಲೆಯಲ್ಲಿ, ಹಂದಿ ಜೆಲಾಟಿನ್ ಹೊಂದಿರುವ ಲಸಿಕೆಯನ್ನು ಮುಸ್ಲಿಮರಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಹಂದಿ ಜೆಲಾಟಿನ್ ಅನ್ನು ಹೊಂದಿರುವ ಚೀನೀ ಲಸಿಕೆ ‘ಹರಾಮ್’ ಆಗಿದ್ದು, ಇದು ಮುಸ್ಲಿಮರಿಗೆ ನಿಷೇಧ. ಆದ್ದರಿಂದ ಇದನ್ನು ತೆಗೆದುಕೊಳ್ಳುವುದು ಉಚಿತವಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ.
PublicNext
24/12/2020 06:54 pm